Kannada News Next

india

ತಮಿಳುನಾಡಿನಲ್ಲಿ ಬೆಚ್ಚಿಬೀಳಿಸೋ ಘಟನೆ : ಶಿಕ್ಷಕಿಯ ಸಮಯಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ಬದುಕುಳಿದ 50ಕ್ಕೂ ಹೆಚ್ಚು ಮುಗ್ಧ ಮಕ್ಕಳು!

ಶಾಲಾ ಮುಗ್ಧ ಮಕ್ಕಳ ಬಿಸಿಯೂಟದ ಸಾಂಬಾರ್‌ಗೆ ರಾಸಾಯನಿಕ ಪುಡಿ ಬೆರೆಸಿ ಸೇಡು ತೀರಿಸಿಕೊಳ್ಳಲು ಯತ್ನಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

By ರಶ್ಮಿ ಎಸ್. | Rashmi S
man-arrested-for-mixing-toxic-powder-in-school-food

ತಮಿಳುನಾಡಿನ ಈರೋಡ್ ಜಿಲ್ಲೆಯ ಸತ್ಯಮಂಗಲಂ ಭಾಗದಲ್ಲಿ ಮಾನವೀಯತೆಯನ್ನೇ ಮರೆತು ವಿಕೃತವಾಗಿ ವರ್ತಿಸಿದ ವ್ಯಕ್ತಿಯೊಬ್ಬ, ಶಾಲಾ ಮುಗ್ಧ ಮಕ್ಕಳ ಬಿಸಿಯೂಟದ ಸಾಂಬಾರ್‌ಗೆ ರಾಸಾಯನಿಕ ಪುಡಿ ಬೆರೆಸಿ ಸೇಡು ತೀರಿಸಿಕೊಳ್ಳಲು ಯತ್ನಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಬಂಧಿತ ಆರೋಪಿಯನ್ನು ಆರುಮುಗಂ ಎಂದು ಗುರುತಿಸಲಾಗಿದ್ದು, ಈತನ ಪತ್ನಿ ಅಲಮೇಲು ಈ ಹಿಂದೆ ಇದೇ ಶಾಲೆಯಲ್ಲಿ ಬಿಸಿಯೂಟದ ಅಡುಗೆ ಕೆಲಸ ಮಾಡುತ್ತಿದ್ದಳು. ಆದರೆ ಆಕೆಯ ಅಡುಗೆಯ ಗುಣಮಟ್ಟ ಸರಿಯಿಲ್ಲದ ಕಾರಣ ಶಾಲಾ ಆಡಳಿತ ಮಂಡಳಿಯು ಆಕೆಯನ್ನು ಕೆಲಸದಿಂದ ವಜಾಗೊಳಿಸಿತ್ತು. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ಕ್ರೋಧಗೊಂಡಿದ್ದ ಆರುಮುಗಂ, ಶಾಲೆಯ ಮುಖ್ಯಸ್ಥರ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳಲು ಸಂಚು ರೂಪಿಸಿದ್ದನು.

ತನ್ನ ಕುತಂತ್ರವನ್ನು ಕಾರ್ಯಗತಗೊಳಿಸಲು ಆತ ಇದೇ ಶಾಲೆಯ ಎಂಟನೇ ತರಗತಿಯ ಮುಗ್ಧ ವಿದ್ಯಾರ್ಥಿನಿಯೊಬ್ಬಳಿಗೆ ಕೇವಲ ಹತ್ತು ರೂಪಾಯಿ ಹಣ ಹಾಗೂ ಹೊಸ ಬಟ್ಟೆಯ ಆಮಿಷವೊಡ್ಡಿದ್ದನು. ಮಾರುಕಟ್ಟೆಯಿಂದ ತಂದಿದ್ದ ವಿಷಕಾರಿ ಸಗಣಿ ಪುಡಿಯನ್ನು ಸಾಂಬಾರ್ ಪಾತ್ರೆಗೆ ಬೆರೆಸುವಂತೆ ಆ ಬಾಲಕಿಗೆ ಒತ್ತಾಯಿಸಿದ್ದನು. ಆದರೆ ಅದೃಷ್ಟವಶಾತ್ ಶಾಲೆಯ ಶಿಕ್ಷಕಿ ರೇವತಿ ಅವರು ನಿಯಮದಂತೆ ಮಕ್ಕಳ ಊಟಕ್ಕೂ ಮುನ್ನ ಸಾಂಬಾರ್ ಮಾದರಿಯನ್ನು ರುಚಿ ನೋಡಿದಾಗ ಅದು ಅತಿಯಾದ ಕಹಿ ಮತ್ತು ಅಸಹಜ ಹಳದಿ ಬಣ್ಣಕ್ಕೆ ತಿರುಗಿರುವುದು ಕಂಡುಬಂದಿದೆ.

ಪರಿಶೀಲಿಸಿದಾಗ ಕೇವಲ ಪರೀಕ್ಷಾರ್ಥವಾಗಿ ಇರಿಸಲಾಗಿದ್ದ ಸಣ್ಣ ಪಾತ್ರೆಯ ಸಾಂಬಾರ್‌ಗೆ ಮಾತ್ರ ಆ ಪುಡಿ ಬೆರೆತಿರುವುದು ಪತ್ತೆಯಾಗಿದ್ದು, ಪ್ರಮುಖ ಪಾತ್ರೆಯಲ್ಲಿದ್ದ ಆಹಾರ ಸುರಕ್ಷಿತವಾಗಿತ್ತು. ಇದರಿಂದಾಗಿ ಐವತ್ತಕ್ಕೂ ಹೆಚ್ಚು ಮಕ್ಕಳ ಜೀವ ಕೂದಲೆಳೆ ಅಂತರದಲ್ಲಿ ಬದುಕುಳಿದಿದೆ. ಶಾಲೆಯ ಮುಖ್ಯೋಪಾಧ್ಯಾಯಿನಿ ನೀಡಿದ ದೂರಿನ ಮೇರೆಗೆ ಸತ್ಯಮಂಗಲಂ ಪೊಲೀಸರು ಆರೋಪಿಯನ್ನು ಬಂಧಿಸಿ, ಭಾರತೀಯ ನ್ಯಾಯ ಸಂಹಿತೆಯಸೆಕ್ಷನ್ 123ರ ಅಡಿಯಲ್ಲಿ ಗಂಭೀರ ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದಾರೆ.