Kannada News Next

india

ದೇವಾಲಯಗಳಲ್ಲಿ ಸೆಪ್ಟೆಂಬರ್ 1ರಿಂದ ಮೊಬೈಲ್ ನಿಷೇಧ: ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ

ರಾಜ್ಯದಾದ್ಯಂತ ಇರುವ ಎಲ್ಲಾ ಪ್ರಸಿದ್ಧ ದೇವಾಲಯಗಳ ಒಳಗೆ ಸೆಪ್ಟೆಂಬರ್ ೧ ರಿಂದ ಮೊಬೈಲ್ ಫೋನ್‌ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧ

By Meghana Pranuth | ಮೇಘನಾ ಪ್ರಣೂತ್‌
MobileBanInTemples

ಚೆನ್ನೈ/ತಿರುಚಿ: ದೇವಾಲಯಗಳ ಪವಿತ್ರತೆ ಮತ್ತು ಭಕ್ತರ ನೆಮ್ಮದಿಗೆ ಧಕ್ಕೆ ತರುತ್ತಿದ್ದ ಮೊಬೈಲ್ ಸಂಸ್ಕೃತಿಗೆ ತಮಿಳುನಾಡು ಸರ್ಕಾರ ಬಿಗ್ ಬ್ರೇಕ್ ಹಾಕಿದೆ. ರಾಜ್ಯದಾದ್ಯಂತ ಇರುವ ಎಲ್ಲಾ ಪ್ರಸಿದ್ಧ ದೇವಾಲಯಗಳ ಒಳಗೆ ಸೆಪ್ಟೆಂಬರ್ ೧ ರಿಂದ ಮೊಬೈಲ್ ಫೋನ್‌ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ (HR&CE) ಸಚಿವ ಎಸ್. ರಮೇಶ್ ಘೋಷಿಸಿದ್ದಾರೆ. ತಿರುಚಿಯ ಪ್ರಸಿದ್ಧ ಶ್ರೀರಂಗಂ ದೇವಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ನಿಷೇಧಕ್ಕೆ ಮುಖ್ಯ ಕಾರಣವೇನು?

ಇತ್ತೀಚಿನ ದಿನಗಳಲ್ಲಿ ದೇವಸ್ಥಾನಗಳ ಗರ್ಭಗುಡಿ ಹಾಗೂ ಪವಿತ್ರ ಪೂಜಾ ಕೈಂಕರ್ಯಗಳ ವೀಡಿಯೊಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿಸಲಾಗುತ್ತಿತ್ತು.

ದೇವಸ್ಥಾನದ ಆವರಣದಲ್ಲಿ 'ರೀಲ್ಸ್' (Reels) ಮತ್ತು ಶಾರ್ಟ್ಸ್ ವೀಡಿಯೊಗಳನ್ನು ಮಾಡುವುದನ್ನು ತಡೆಯುವುದು. ಧಾರ್ಮಿಕ ಸ್ಥಳಗಳ ಪವಿತ್ರತೆ ಹಾಗೂ ಭಕ್ತರ ಖಾಸಗಿತನವನ್ನು ಕಾಪಾಡುವುದು. ದರ್ಶನದ ವೇಳೆ ಉಂಟಾಗುವ ಅನಗತ್ಯ ವಿಳಂಬ ಮತ್ತು ಜನಸಂದಣಿಯನ್ನು ತಡೆಯುವುದು.

 ಭಕ್ತಾದಿಗಳು ದೇವಸ್ಥಾನ ಪ್ರವೇಶಿಸುವ ಮೊದಲು ತಮ್ಮ ಮೊಬೈಲ್ ಫೋನ್‌ಗಳನ್ನು ಇಡಲು ಪ್ರವೇಶ ದ್ವಾರದಲ್ಲೇ ಪ್ರತ್ಯೇಕ ‘ಡೆಪಾಸಿಟ್ ಕೌಂಟರ್‌ಗಳನ್ನು’ ಸ್ಥಾಪಿಸಲಾಗುತ್ತದೆ. ದೇವರದರ್ಶನ ಮುಗಿಸಿ ಬರುವವರೆಗೆ ಮೊಬೈಲ್ ಫೋನ್‌ಗಳನ್ನು ಸುರಕ್ಷಿತವಾಗಿಡಲು ಪ್ರತಿ ಫೋನ್‌ಗೆ ₹5 ಶುಲ್ಕ ವಿಧಿಸಲಾಗುತ್ತದೆ.

ಇನ್ನೂ ರಾಜಕಾರಣಿಗಳು, ಚಲನಚಿತ್ರ ತಾರೆಯರು ಹಾಗೂ ಗಣ್ಯರು ದೇವಾಲಯಕ್ಕೆ ಭೇಟಿ ನೀಡುವ ಒಂದು ದಿನ ಮುಂಚಿತವಾಗಿ HR&CE ಆಯುಕ್ತರಿಗೆ ಮಾಹಿತಿ ನೀಡಬೇಕು. ಭೇಟಿಯ ಸಮಯ ಹಾಗೂ ಜೊತೆಯಲ್ಲಿ ಬರುವವರ ಸಂಖ್ಯೆಯನ್ನು ಮುಂಚಿತವಾಗಿಯೇ ತಿಳಿಸಬೇಕು.

ತುರ್ತು ಸಂದರ್ಭದ ವಿಐಪಿ ಭೇಟಿಗಳಿದ್ದರೂ, ಸಾಮಾನ್ಯ ಭಕ್ತರ ದರ್ಶನಕ್ಕೆ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ವಿಐಪಿ ಭೇಟಿಗಳ ಸಂದರ್ಭದಲ್ಲೂ ದೇವಾಲಯದ ಒಳಗೆ ಯಾವುದೇ ರೀತಿಯ ವೀಡಿಯೋಗ್ರಫಿ ಅಥವಾ ಫೋಟೋಗ್ರಫಿಗೆ ಅವಕಾಶವಿರುವುದಿಲ್ಲ.