Kannada News Next

india

ಸರಕಾರಿ ಆಸ್ಪತ್ರೆಗಳಲ್ಲಿ ಜನಿಸಿದ ಮಕ್ಕಳಿಗೆ ಚಿನ್ನದ ಉಂಗುರ ಯೋಜನೆಗೆ ಚಾಲನೆ

ತಮಿಳುನಾಡಿನ ಮಧುರೈನಲ್ಲಿ ಮುಖ್ಯಮಂತ್ರಿ ವಿಜಯ್‌ ಜೋಸೆಫ್‌ ಅವರು ಆಗತಾನೆ ಜನಸಿದ್ದ ಮಗುವಿನ ಬೆರಳಿಗೆ 1 ಗ್ರಾಂ ಚಿನ್ನದ ಉಂಗುರ ತೊಡಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದ್ದಾರೆ.

By Arun Gundmi | ಅರುಣ್‌ ಗುಂಡ್ಮಿ Editor-in-Chief
Tamil nadu Gold Ring Scheme Launched By CM Vijay Joseph

ಚೆನ್ನೈ: ಪಂಚ ಗ್ಯಾರಂಟಿ ಯೋಜನೆಯಂತೆಯೇ ಸರಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಯಾಗಿ ಜನಿಸುವ ನವಜಾತ ಶಿಶುಗಳಿಗೆ ಉಚಿತವಾಗಿ ಚಿನ್ನದ ಉಂಗುರ ನೀಡುವ ಯೋಜನೆ ಅಧಿಕೃತವಾಗಿ ಜಾರಿಗೆ ಬಂದಿದೆ. ತಮಿಳುನಾಡು ಸರಕಾರ ತಾಯ್‌ ಮಾವನ್‌ ತಂಗ ಮೋದಿರಂ ಯೋಜನೆಗೆ ತಮಿಳುನಾಡು ಸಿಎಂ ಜೋಸೆಫ್‌ ವಿಜಯ್‌ ಚಾಲನೆ ನೀಡಿದ್ದಾರೆ.

ತಮಿಳುನಾಡಿನ ಮಧುರೈನಲ್ಲಿರುವ ಸರಕಾರಿ ರಾಜಾಜಿ ಆಸ್ಪತ್ರೆಗೆ ಭೇಟಿ ನೀಡಿದ ಮುಖ್ಯಮಂತ್ರಿ ವಿಜಯ್‌ ಜೋಸೆಫ್‌ ಅವರು ಆಗತಾನೆ ಜನಸಿದ್ದ ಮಗುವಿನ ಬೆರಳಿಗೆ 1 ಗ್ರಾಂ ಚಿನ್ನದ ಉಂಗುರ ತೊಡಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದ್ದಾರೆ. ಅಲ್ಲದೇ ಆಸ್ಪತ್ರೆಯಲ್ಲಿದ್ದ ಬಾಣಂತಿಯರು ಹಾಗೂ ಶಿಶುಗಳ ಯೋಗಕ್ಷೇಮ ವಿಚಾರಿಸಿದ್ದು, ಪೋಷಕರಿಗೆ ಉಂಗುರಗಳನ್ನು ವಿತರಿಸಿದ್ದಾರೆ.

ತಮಿಳುನಾಡು ಚಿನಾವಣೆಯ ವೇಳೆಯಲ್ಲಿ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಚುನಾವಣಾ ಪ್ರನಾಳಿಕೆಯಲ್ಲಿ ನವಜಾತ ಶಿಶುಗಳಿಗೆ ಚಿನ್ನದ ಉಂಗುರ ನೀಡುವ ಯೋಜನೆ ಘೋಷಿಸಿದ್ದರು. ಇದೀಗ ಟಿವಿಕೆ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಸಿಎಂ ವಿಜಯ್‌ ಈ ಯೋಜನೆಯನ್ನು ಜಾರಿಗೆ ತಂದಿದ್ದರು. ತಮಿಳುನಾಡು ಸರಕಾರ ಈ ಯೋಜನೆಗಾಗಿ ವಾರ್ಷಿಕ 755 ಕೋಟಿ ರೂಪಾಯಿ ವಿನಿಯೋಗಿಸುತ್ತಿದೆ.

ತಮಿಳುನಾಡು ಸರಕಾರದ ಆಸ್ಪತ್ರೆಯಲ್ಲಿ ಜನಿಸುವ ಪ್ರತೀ ಮಗುವಿಗೆ 22 ಕ್ಯಾರೆಟ್‌ನ 1 ಗ್ರಾಂ ತೂಕದ ಚಿನ್ನದ ಉಂಗುರ ಲಭಿಸಲಿದೆ. ಆರಂಭದಲ್ಲಿ ಸುಮಾರು 1.28 ಲಕ್ಷ ಉಂಗುರಗಳನ್ನು ತಯಾರಿಸಿ ಇಟ್ಟುಕೊಳ್ಳಲಾಗಿದೆ. ಯೋಜನೆಯಲ್ಲಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಪ್ರತೀ ಉಂಗುರಕ್ಕೂ ನೋಂದಣಿ ಸಂಖ್ಯೆಯನ್ನು ಹಾಕಲಾಗಿದೆ.

ಯಾವುದೇ ಕಾರಣಕ್ಕೂ ತಿರುಚೋದಕ್ಕೆ ಸಾಧ್ಯವಾಗದ ರೀತಿ ಪ್ಯಾಕಿಂಗ್‌ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಕಲ್ಯಾಣ್‌ ಜ್ಯುವೆಲ್ಲರ್ಸ್‌, ಜೋ ಅಲುಕಾಸ್‌ ಆಭರಣ ಮಳಿಗೆಗಳನ್ನು ಈ ಚಿನ್ನದ ಉಂಗುರವನ್ನು ವಿತರಣೆ ಮಾಡುತ್ತಿದೆ. ತಮಳುನಾಡಿನಲ್ಲಿ ಖಾಯಂ ನಿವಾಸಿಯಾಗಿರುವ ತಾಯಿಗೆ ಜನಿಸುವ ಮಗುವಿಗೆ ಮಾತ್ರವೇ ಈ ಯೋಜನೆ ಲಭ್ಯವಾಗಲಿದೆ.

ಈ ಯೋಜನೆಯ ಅಡಿಯಲ್ಲಿ ಸೌಲಭ್ಯ ಪಡೆಯಬೇಕಾದ್ರೆ ಮಕ್ಕಳ ಆರೋಗ್ಯ ಕಾರ್ಡ್‌ ನೋಂದಣಿ ಕಡ್ಡಾಯಗೊಳಿಸಲಾಗಿದೆ. ತಾಯಿ ಮತ್ತು ಮಗು ಆಸ್ಪತ್ರೆಯಿಂದ ಬಿಡುಗಡೆ ಆಗುವ ಸಂದರ್ಭದಲ್ಲಿಯೇ ಈ ಉಂಗುರವನ್ನು ಹಸ್ತಾಂತರಿಸಲಾಗುತ್ತದೆ.