ಅತ್ಯಂತ ಶ್ರೀಮಂತ ದೇವರು ಎಂಬ ಖ್ಯಾತಿಗಳಿಸಿರುವ ತಿರುಪತಿ ತಿಮ್ಮಪ್ಪ ದೇವಸ್ಥಾನದಲ್ಲಿ ಭಕ್ತರಿಗಾಗಿ ಟಿಟಿಡಿ ಹೊಸ ರೂಲ್ಸ್ ಜಾರಿ ಮಾಡಿದೆ. ಮುಂದಿನ 10 ದಿನಗಳ ಕಾಲ ವಿಐಪಿ ದರ್ಶನಕ್ಕೆ ಬ್ರೇಕ್ ಹಾಕಿದೆ. ಅಲ್ಲದೇ ಎಲ್ಲಾ ರೀತಿಯ ಪ್ರಿವಿಲೇಜ್ಡ್ ದರ್ಶನಗಳ ಜೊತೆಗೆ ಶ್ರೀವಾಣಿ ಟಿಕೆಟ್‌ಗಳನ್ನೂ ರದ್ದುಗೊಳಿಸಲಾಗಿದೆ. ಹೀಗಾಗಿ ಸಾಮಾನ್ಯ ಭಕ್ತರಿಗಷ್ಟೇ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.
ತಿರುಮಲದಲಿ ನಡೆಯಲಿರುವ ಸಾಲಕಟ್ಲ ಬ್ರಹ್ಮೋತ್ಸವದ ಹಿನ್ನೆಲೆಯಲ್ಲಿ ತಿರುಪತಿಯಲ್ಲಿ ಭಕ್ತರ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿದೆ. ಈ ಹೊತ್ತಿನಲ್ಲಿ ಸಾಮಾನ್ಯ ಭಕ್ತರಿಗೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ಟಿಟಿಡಿ ಹಲವು ನಿರ್ಧಾರಗಳನ್ನು ಕೈಗೊಂಡಿದ್ದು, ಸೆಪ್ಟೆಂಬರ್ 23ರವರೆಗೆ ಒಟ್ಟು 10 ದಿನಗಳ ಕಾಲ ವಿಐಪಿ ಬ್ರೇಕ್ ದರ್ಶನಕ್ಕೆ ಸಂಪೂರ್ಣವಾಗಿ ಬ್ರೇಕ್ ಹಾಕಿದೆ.
ಸೆಪ್ಟೆಂಬರ್ 15ರಿಂದ ವೆಂಕಟೇಶ್ವರ ಸ್ವಾಮಿಯ ಸಾಲಕಟ್ಲ ಬ್ರಹ್ಮೋತ್ಸವ ಆರಂಭವಾಗಲಿದ್ದು ಮುಂದಿನ 10 ದಿನಗಳ ಕಾಲ ಅಂದ್ರೆ ಸೆಪ್ಟೆಂಬರ್ 23ರ ವರೆಗೆ ನಡೆಯಲಿದೆ. ಬ್ರಹ್ಮೋತ್ಸವದ ಸಂದರ್ಭದಲ್ಲಿ ಸಾಮಾನ್ಯ ಭಕ್ತರಿಗೆ ಹೆಚ್ಚಿನ ಸಂಖ್ಯೆಯಲ್ಲಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ವಿಐಪಿ ದರ್ಶನ ರದ್ದಾಗುವ ಹಿನ್ನೆಲೆಯಲ್ಲಿ ಪ್ರತಿದಿನ ಸುಮಾರು 3 ಗಂಟೆಗಳ ಸಮಯ ಉಳಿತಾಯವಾಗಲಿದೆ. ಈ ಅವಧಿಯನ್ನು ಸಾಮಾನ್ಯ ಭಕ್ತರಿಗೆ ನೀಡುವುದು ಟಿಟಿಡಿ ಮುಖ್ಯ ಉದ್ದೇಶ.
ಸಾಲಕಟ್ಲ ಬ್ರಹ್ಮೋತ್ಸವಕ್ಕಾಗಿ ತಿರುಪತಿಯಲ್ಲಿ ಟಿಟಿಡಿ ಈಗಾಗಲೇ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ. ಸೆಪ್ಟೆಂಬರ್ 15ರಂದು ಸಂಜೆ 6.21ಕ್ಕೆ ಧ್ವಜಾರೋಹಣ ನಡೆಯಲಿದ್ದು, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ರಾಜ್ಯ ಸರಕಾರದ ಪರವಾಗಿ ಶ್ರೀವಾರಿಗೆ ಪಟ್ಟು ವಸ್ತುಗಳನ್ನು ಸಮರ್ಪಣೆ ಮಾಡಲಿದ್ದು, ನಂತರ ಶ್ರೀವಾರಿಯ ದರ್ಶನ ಪಡೆಯಲಿದ್ದಾರೆ. ತಿರುಪತಿಯಲ್ಲಿ ನಿತ್ಯವೂ ಸುಮಾರು 80 ಸಾವಿರಕ್ಕೂ ಅಧಿಕ ಭಕ್ತರಿಗೆ ಶ್ರೀವಾರಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ವಿಐಪಿ ದರ್ಶನ ಮಾತ್ರವಲ್ಲ, ವಿಐಪಿ ಕೊಠಡಿಗಳು ಕೂಡ ಸಾಮಾನ್ಯ ಭಕ್ತರಿಗೆ ಲಭ್ಯವಾಗಲಿದೆ.