ಆಧಾರ್ ಕಾರ್ಡ್‌ನಲ್ಲಿ ಸಾರ್ವಜನಿಕರು ತಮಗೆ ಇಷ್ಟಬಂದಂತೆ ಹೆಸರು ಬದಲಾಯಿಸುವುದಕ್ಕೆ ಮತ್ತು ನಕಲಿ ದಾಖಲೆಗಳನ್ನು ನೀಡಿ ವಂಚಿಸುವುದಕ್ಕೆ ಕಡಿವಾಣ ಹಾಕಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ.
ಗಡಿಸಲಾಗಿದ್ದು ಪ್ರತಿಯೊಂದಕ್ಕೂ ಪ್ರತ್ಯೇಕ ದಾಖಲೆಗಳನ್ನು ಕಡ್ಡಾಯಗೊಳಿಸಲಾಗಿದೆ. ಸೆಪ್ಟೆಂಬರ್ ತಿಂಗಳಿನಿಂದಲೇ ಜಾರಿಗೆ ಬಂದಿರುವ ಈ ನಿಯಮಾವಳಿಗಳ ಪ್ರಕಾರ, ಹೆಸರು ತಿದ್ದುಪಡಿ ಪ್ರಕ್ರಿಯೆಯನ್ನು ವಿವಿಧ ವಿಭಾಗಗಳಾಗಿ ವಿಂ
ಸಾಮಾನ್ಯವಾಗಿ ಹೆಸರಿನಲ್ಲಿರುವ ಸಣ್ಣಪುಟ್ಟ ಕಾಗುಣಿತ ತಪ್ಪುಗಳು, ಇನಿಷಿಯಲ್ ಸೇರ್ಪಡೆ ಅಥವಾ ವಿಸ್ತರಣೆ ಮತ್ತು ಮನೆಹೆಸರನ್ನು ಸರಿಪಡಿಸಲು ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ, ಪಾನ್ ಕಾರ್ಡ್ ಅಥವಾ ಚಾಲನಾ ಪರವಾನಗಿಯಂತಹ ಅಧಿಕೃತ ಗುರುತಿನ ಪುರಾವೆಗಳನ್ನು ಸಲ್ಲಿಸಬೇಕಾಗುತ್ತದೆ.
ಇನ್ನು ಮಹಿಳೆಯರು ವಿವಾಹದ ನಂತರ ಗಂಡನ ಮನೆಹೆಸರು ಸೇರಿಸಲು ಅಥವಾ ವಿಚ್ಛೇದನದ ಬಳಿಕ ಹೆಸರು ಬದಲಾಯಿಸಲು ಇಚ್ಛಿಸಿದರೆ, ವಿವಾಹ ನೋಂದಣಿ ಪ್ರಮಾಣಪತ್ರದೊಂದಿಗೆ ಪ್ರಾಧಿಕಾರ ನಿಗದಿಪಡಿಸಿದ ನಮೂನೆಯಲ್ಲಿ ಅಫಿಡವಿಟ್ ನೀಡುವುದು ಕಡ್ಡಾಯವಾಗಿದೆ. ಒಂದು ವೇಳೆ ಆಧಾರ್‌ನಲ್ಲಿ ಇಂಗ್ಲಿಷ್ ಹೆಸರು ಸರಿಯಾಗಿದ್ದು, ಪ್ರಾದೇಶಿಕ ಭಾಷೆಯಾದ ಕನ್ನಡದಲ್ಲಿ ದೋಷಗಳಿದ್ದರೆ ಅದನ್ನು ಸರಿಪಡಿಸಲೂ ಸಹ ನಿಗದಿತ ಪ್ರಮಾಣಪತ್ರದ ಅಗತ್ಯವಿದೆ.
ಈ ಎಲ್ಲ ನಿಯಮಗಳಿಗಿಂತ ಹೆಚ್ಚಾಗಿ, ಒಬ್ಬ ವ್ಯಕ್ತಿ ತನ್ನ ಮೂಲ ಹೆಸರನ್ನೇ ಸಂಪೂರ್ಣವಾಗಿ ಹೊಸ ಹೆಸರಿಗೆ ಬದಲಾಯಿಸಲು ಬಯಸಿದರೆ ಪ್ರಕ್ರಿಯೆ ಇನ್ನು ಮುಂದೆ ಕಷ್ಟಕರವಾಗಲಿದೆ. ಅದಕ್ಕಾಗಿ ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಧಿಕೃತ ಗೆಜೆಟ್ ಅಧಿಸೂಚನೆಯ ಪತ್ರದ ಜೊತೆಗೆ ಹೊಸ ಹೆಸರಿನ ಜಾಹೀರಾತು ಪ್ರಕಟವಾಗಿರುವ ಪತ್ರಿಕೆಯ ಪ್ರತಿಯನ್ನು ಸಲ್ಲಿಕೆ ಮಾಡಬೇಕು.
ಸದ್ಯಕ್ಕೆ ಆನ್‌ಲೈನ್‌ನಲ್ಲಿ ಕೇವಲ ವಿಳಾಸ ಬದಲಾವಣೆಗಷ್ಟೇ ಮುಕ್ತ ಅವಕಾಶವಿದ್ದು, ಹೆಸರು ತಿದ್ದುಪಡಿಗಾಗಿ ಸಾರ್ವಜನಿಕರು 75 ರೂಪಾಯಿ ನಿಗದಿತ ಶುಲ್ಕದೊಂದಿಗೆ ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ಬಯೋಮೆಟ್ರಿಕ್ ದೃಢೀಕರಣ ಮಾಡಿಸಬೇಕಾಗುತ್ತದೆ. ಪ್ರಮುಖವಾಗಿ ಒಬ್ಬ ವ್ಯಕ್ತಿಗೆ ತನ್ನ ಜೀವಿತಾವಧಿಯಲ್ಲಿ ಗರಿಷ್ಠ ಎರಡು ಬಾರಿ ಮಾತ್ರ ಹೆಸರು ಬದಲಾವಣೆಗೆ ಅವಕಾಶವಿರುವುದರಿಂದ ಇನ್ಮುಂದೆ ಎಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ.