ಅಡುಗೆ ಎಣ್ಣೆ ಮರುಬಳಕೆಗೆ ರಾಜ್ಯ ಸರ್ಕಾರದಿಂದ ಬ್ರೇಕ್​ : ಬೇಕರಿಗಳ ಮೇಲೆ ಕರ್ನಾಟಕ ಆಹಾರ ಸುರಕ್ಷತಾ ಇಲಾಖೆ ಹದ್ದಿನ ಕಣ್ಣು

ಹೊಸ ನಿಯಮಾವಳಿಗಳ ಪ್ರಕಾರ, ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಯಾವುದೇ ಅಡುಗೆ ಎಣ್ಣೆಯನ್ನು ಮೂರು ಬಾರಿಗಿಂತ ಹೆಚ್ಚು ಬಾರಿ ಬಿಸಿ ಮಾಡುವಂತಿಲ್ಲ.

By ರಶ್ಮಿ ಎಸ್. | Rashmi S

1 min read

WhatsAppPost
karnataka food safety crackdown reused cooking oil bakery
karnataka food safety crackdown reused cooking oil bakery

ಹೋಟೆಲ್‌ಗಳು ಮತ್ತು ಬೇಕರಿಗಳಲ್ಲಿ ಒಂದೇ ಅಡುಗೆ ಎಣ್ಣೆಯನ್ನು ಪದೇ ಪದೇ ಕಾಯಿಸಿ ಬಳಸುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಉಂಟಾಗುವ ಗಂಭೀರ ದುಷ್ಪರಿಣಾಮಗಳನ್ನು ತಡೆಯಲು ರಾಜ್ಯ ಸರ್ಕಾರ ಮುಂದಾಗಿದೆ. ವಾಣಿಜ್ಯ ಆಹಾರ ತಯಾರಿಕಾ ಸಂಸ್ಥೆಗಳಲ್ಲಿ ಅಡುಗೆ ಎಣ್ಣೆಯ ಮರುಬಳಕೆಯನ್ನು ನಿಯಂತ್ರಿಸಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಸಹಯೋಗದೊಂದಿಗೆ ರಾಜ್ಯ ಸರ್ಕಾರವು ಹೊಸ ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತಿದೆ.

ಹೊಸ ನಿಯಮಾವಳಿಗಳ ಪ್ರಕಾರ, ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಯಾವುದೇ ಅಡುಗೆ ಎಣ್ಣೆಯನ್ನು ಮೂರು ಬಾರಿಗಿಂತ ಹೆಚ್ಚು ಬಾರಿ ಬಿಸಿ ಮಾಡುವಂತಿಲ್ಲ. ತರಕಾರಿ ಅಥವಾ ಇತರ ಪದಾರ್ಥಗಳನ್ನು ಕರಿಯಲು ಬಳಸುವ ಎಣ್ಣೆಯಲ್ಲಿ 'ಟೋಟಲ್ ಪೋಲಾರ್ ಕಾಂಪೌಂಡ್ಸ್' ಪ್ರಮಾಣವು ಶೇಕಡಾ 25 ರ ಗಡಿಯನ್ನು ಮೀರಬಾರದು. ಒಂದು ವೇಳೆ ಈ ನಿಗದಿತ ಮಿತಿಗಿಂತ ಹೆಚ್ಚಿನ ಕಳಪೆ ಗುಣಮಟ್ಟದ ಎಣ್ಣೆಯನ್ನು ಅಡುಗೆಗೆ ಬಳಸುತ್ತಿರುವುದು ಕಂಡುಬಂದರೆ ಅಂತಹ ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುತ್ತದೆ.

ಇದರೊಂದಿಗೆ, ಬಳಸಿದ ಎಣ್ಣೆಯ ವಿಲೇವಾರಿಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಗೆ ಬರಲಿದೆ. ಹೋಟೆಲ್ ಮಾಲೀಕರು ತಾವು ಬಳಸಿದ ಎಣ್ಣೆಯನ್ನು ನೇರವಾಗಿ ಸಿಂಕ್ ಅಥವಾ ಸಾರ್ವಜನಿಕ ಚರಂಡಿಗಳಿಗೆ ಸುರಿಯವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತಿದೆ. ಬದಲಿಗೆ, ಹಳೆಯ ಎಣ್ಣೆಯನ್ನು ಅಧಿಕೃತ ಸಂಗ್ರಹಣಾ ಏಜೆನ್ಸಿಗಳಿಗೆ ಹಸ್ತಾಂತರಿಸಬೇಕು.

ಈ ರೀತಿ ಸಂಗ್ರಹಣೆಯಾಗುವ ಎಣ್ಣೆಯನ್ನು ಆಹಾರದ ಸರಪಳಿಯಿಂದ ಶಾಶ್ವತವಾಗಿ ಹೊರಗಿಟ್ಟು, ಬಯೋಡೀಸೆಲ್‌ನಂತಹ ಕೈಗಾರಿಕಾ ಇಂಧನಗಳ ಉತ್ಪಾದನೆಗೆ ಬಳಸಿಕೊಳ್ಳಲು ಸರ್ಕಾರ ಯೋಜನೆ ರೂಪಿಸಿದೆ. ರಾಜ್ಯದಲ್ಲಿ ಈಗಾಗಲೇ ಕಳೆದ ಎರಡು ವರ್ಷಗಳಲ್ಲಿ ಸುಮಾರು 32 ಲಕ್ಷ ಲೀಟರ್‌ಗೂ ಅಧಿಕ ಬಳಸಿದ ಎಣ್ಣೆಯನ್ನು ಇಂತಹ ಪುನರ್ ಬಳಕೆಯ ಪ್ರಕ್ರಿಯೆಗೆ ಒಳಪಡಿಸಲಾಗಿದೆ. ಪ್ರತಿಯೊಂದು ಹೋಟೆಲ್ ಉದ್ಯಮಿಯೂ ಸಹ ತಾವು ಖರೀದಿಸುವ, ಬಳಸುವ ಮತ್ತು ವಿಲೇವಾರಿ ಮಾಡುವ ಎಣ್ಣೆಯ ನಿಖರವಾದ ದಾಖಲೆಯನ್ನು ಕಡ್ಡಾಯವಾಗಿ ನಿರ್ವಹಿಸಬೇಕಾಗುತ್ತದೆ.

Topics

ಸಂಬಂಧಿತ ಸುದ್ದಿಗಳು