Kannada News Next

karnataka

ಬೆಂಗಳೂರು ಟು ಮಂಗಳೂರು ವಿಶೇಷ ರೈಲು : ಕರಾವಳಿ ಪ್ರಯಾಣಿಕರಿಗೆ ಗುಡ್‌ನ್ಯೂಸ್‌

ರೈಲ್ವೆ ಇಲಾಖೆಯ ಅಧಿಕೃತ ವೇಳಾಪಟ್ಟಿಯ ಪ್ರಕಾರ, ರೈಲು ಸಂಖ್ಯೆ 06597 ಬೆಂಗಳೂರು ಕಂಟೋನ್ಮೆಂಟ್ - ಮಡಗಾಂವ್ ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 1 ರಂದು ರಾತ್ರಿ 11.50ಕ್ಕೆ ಹೊರಡಲಿದೆ.

By ರಶ್ಮಿ ಎಸ್. | Rashmi S
Bengaluru to Mangaluru Special Train Good News for Coastal Travelers

ಬೆಂಗಳೂರು : ವಾರಾಂತ್ಯದ ದಿನಗಳಲ್ಲಿ ಊರುಗಳಿಗೆ ತೆರಳುವ ಪ್ರಯಾಣಿಕರ ಭಾರಿ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆಯು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ.

ಬೆಂಗಳೂರು, ಮಂಗಳೂರು ಮತ್ತು ಗೋವಾ ಭಾಗದ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಕಂಟೋನ್ಮೆಂಟ್ ಮತ್ತು ಮಡಗಾಂವ್ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಘೋಷಿಸಿದೆ.

ರೈಲ್ವೆ ಇಲಾಖೆಯ ಅಧಿಕೃತ ವೇಳಾಪಟ್ಟಿಯ ಪ್ರಕಾರ, ರೈಲು ಸಂಖ್ಯೆ 06597 ಬೆಂಗಳೂರು ಕಂಟೋನ್ಮೆಂಟ್ - ಮಡಗಾಂವ್ ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 1 ರಂದು ರಾತ್ರಿ 11.50ಕ್ಕೆ ಬೆಂಗಳೂರಿನಿಂದ ಹೊರಡಲಿದೆ. ಈ ರೈಲು ಮರುದಿನ ಅಂದರೆ ಅಕ್ಟೋಬರ್ 2 ರಂದು ಸಂಜೆ 6.10ಕ್ಕೆ ಮಡಗಾಂವ್ ತಲುಪಲಿದೆ.

ಇನ್ನು ಮರುಪ್ರಯಾಣದಲ್ಲಿ ರೈಲು ಸಂಖ್ಯೆ 06598 ಮಡಗಾಂವ್ - ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 4 ರಂದು ಬೆಳಗ್ಗೆ 8.40ಕ್ಕೆ ಮಡಗಾಂವ್‌ನಿಂದ ಹೊರಡಲಿದ್ದು, ಅದೇ ದಿನ ರಾತ್ರಿ 11.55ಕ್ಕೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣವನ್ನು ಬಂದು ತಲುಪಲಿದೆ.

ಈ ವಿಶೇಷ ರೈಲು ಎಸ್‌ಎಮ್‌ವಿಟಿ ಬೆಂಗಳೂರು, ಹಾಸನ, ಸಕಲೇಶಪುರ, ಸುರತ್ಕಲ್, ಉಡುಪಿ, ಕುಂದಾಪುರ ಹಾಗೂ ಕಾರವಾರ ಸೇರಿದಂತೆ ಮಾರ್ಗಮಧ್ಯದ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲ್ಲಲಿದೆ.

ವೀಕೆಂಡ್‌ಗಳಲ್ಲಿ ಖಾಸಗಿ ಬಸ್‌ಗಳ ದುಬಾರಿ ದರದಿಂದ ತೊಂದರೆಗೀಡಾಗುತ್ತಿದ್ದ ಪ್ರಯಾಣಿಕರಿಗೆ ಈ ರೈಲು ಆರಾಮದಾಯಕ ಹಾಗೂ ಕಡಿಮೆ ವೆಚ್ಚದ ಪ್ರಯಾಣದ ಅವಕಾಶ ಕಲ್ಪಿಸಿದ್ದು, ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳುವಂತೆ ರೈಲ್ವೇ ಇಲಾಖೆ ಕೋರಿದೆ.