News Next Kannada

karnataka

ಓಲಾ, ಉಬರ್, ರ‍್ಯಾಪಿಡೋ ಬಳಕೆದಾರರಿಗೆ ಕೇಂದ್ರದಿಂದ ಬಿಗ್‌ ರಿಲೀಫ್‌: 'ಪ್ರಿ-ರೈಡ್ ಟಿಪ್ಸ್' ಸಂಪೂರ್ಣ ಬ್ಯಾನ್!

ಆನ್‌ಲೈನ್ ಮೂಲಕ ಕ್ಯಾಬ್ ಹಾಗೂ ಆಟೋಗಳನ್ನು ಬುಕ್ ಮಾಡುವ ಸವಾರರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿ ಸುದ್ದಿ ನೀಡಿದೆ.

By Meghana Pranuth | ಮೇಘನಾ ಪ್ರಣೂತ್‌
ola uber

ಆನ್‌ಲೈನ್ ಮೂಲಕ ಕ್ಯಾಬ್ ಹಾಗೂ ಆಟೋಗಳನ್ನು ಬುಕ್ ಮಾಡುವ ಸವಾರರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿ ಸುದ್ದಿ ನೀಡಿದೆ. ಆ್ಯಪ್‌ಗಳಲ್ಲಿ ಬುಕಿಂಗ್ ಮಾಡುವ ಮುನ್ನವೇ ಚಾಲಕರಿಗೆ ಮುಂಗಡವಾಗಿ ಟಿಪ್ಸ್ ನೀಡುವಂತೆ ಗ್ರಾಹಕರನ್ನು ಪ್ರಲೋಭಿಸುವ ಹಾಗೂ ಒತ್ತಾಯಿಸುವ ವ್ಯವಸ್ಥೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ತಕ್ಷಣದಿಂದಲೇ ಜಾರಿಗೆ ಬರುವಂತೆ ಕಟ್ಟುನಿಟ್ಟಿನ ಬ್ರೇಕ್ ಹಾಕಿದೆ.

ಇತ್ತೀಚಿನ ದಿನಗಳಲ್ಲಿ ಓಲಾ, ಉಬರ್ ಮತ್ತು ರ್ಯಾಪಿಡೋದಂತಹ ಪ್ರಮುಖ ರೈಡ್-ಹೇಲಿಂಗ್ ಆ್ಯಪ್‌ಗಳು ಕ್ಯಾಬ್ ಹುಡುಕುವ ಸಮಯದಲ್ಲಿ "ಹೆಚ್ಚುವರಿ ಟಿಪ್ಸ್ ಸೇರಿಸಿ, ಬೇಗನೆ ರೈಡ್ ಬುಕ್ ಮಾಡಿ" ಎಂಬ ಸಂದೇಶಗಳನ್ನು ಪ್ರದರ್ಶಿಸುತ್ತಿದ್ದವು.

ಇದರಿಂದಾಗಿ ಹೆಚ್ಚುವರಿ ಹಣ ನೀಡದಿದ್ದರೆ ಚಾಲಕರು ರೈಡ್‌ಗಳನ್ನು ಸ್ವೀಕರಿಸದೇ ಇರುವುದು ಅಥವಾ ಬುಕಿಂಗ್ ರದ್ದಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದು ಗ್ರಾಹಕರ ಮೇಲೆ ಅನಗತ್ಯ ಆರ್ಥಿಕ ಮತ್ತು ಮಾನಸಿಕ ಒತ್ತಡವನ್ನು ಸೃಷ್ಟಿಸುತ್ತಿದೆ ಎಂಬ ಸಾರ್ವಜನಿಕರ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಹೊಸ 'ಮೋಟಾರು ವಾಹನ ಅಗ್ರಿಗೇಟರ್ ಮಾರ್ಗಸೂಚಿಗಳು 2025' ರ ಅಡಿಯಲ್ಲಿ, ಬುಕಿಂಗ್‌ಗೂ ಮುನ್ನವೇ ಹೆಚ್ಚುವರಿ ಶುಲ್ಕ ಅಥವಾ ಟಿಪ್ಸ್ ಕೇಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇದನ್ನು ಅನುಚಿತ ವ್ಯಾಪಾರ ವಹಿವಾಟು ಎಂದು ಪರಿಗಣಿಸಲಾಗಿದ್ದು, ಇನ್ಮುಂದೆ ಇಂತಹ ಯಾವುದೇ ಆಯ್ಕೆಗಳು ಆ್ಯಪ್‌ನಲ್ಲಿ ಕಾಣಿಸಿಕೊಳ್ಳುವಂತಿಲ್ಲ.

ಪ್ರಯಾಣಿಕರು ಚಾಲಕರ ಉತ್ತಮ ಸೇವೆಗೆ ಮೆಚ್ಚಿ ಸ್ವಇಚ್ಛೆಯಿಂದ ಹಣ ನೀಡಲು ಬಯಸಿದರೆ, ಅದಕ್ಕೆ ಸಂಪೂರ್ಣ ಪ್ರಯಾಣ ಮುಗಿದ ನಂತರವಷ್ಟೇ ಅವಕಾಶವಿರಲಿದೆ. ಅಷ್ಟೇ ಅಲ್ಲದೆ, ಗ್ರಾಹಕರು ನೀಡುವ ಈ ಟಿಪ್ಸ್ ಮೊತ್ತದಲ್ಲಿ ಯಾವುದೇ ಕಂಪನಿಯು ಕಮಿಷನ್ ಕಡಿತಗೊಳಿಸುವಂತಿಲ್ಲ ಮತ್ತು ಆ ಸಂಪೂರ್ಣ ಹಣವು ನೇರವಾಗಿ ಚಾಲಕರ ಕೈಸೇರಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಕಟ್ಟುನಿಟ್ಟಿನ ನಿಯಮದಿಂದ ಆನ್‌ಲೈನ್ ಸಾರಿಗೆ ಮಾರುಕಟ್ಟೆಯಲ್ಲಿ ಗ್ರಾಹಕರ ಸುಲಿಗೆಗೆ ದೊಡ್ಡ ಮಟ್ಟದ ಬ್ರೇಕ್ ಬೀಳಲಿದೆ.