ರಾಜ್ಯದ ನಿವೃತ್ತ ನೌಕರರಿಗೆ  ಸಿಹಿಸುದ್ದಿ: 'ಸಂಧ್ಯಾ ಕಿರಣ' ಯೋಜನೆಗೆ ಸಚಿವ ಸಂಪುಟ ಅಸ್ತು!

ವಯಸ್ಸಾದ ಕಾಲದಲ್ಲಿ ಎದುರಾಗುವ ಆರೋಗ್ಯ ಸಮಸ್ಯೆ ಹಾಗೂ ಗಗನಕ್ಕೇರುತ್ತಿರುವ ಆಸ್ಪತ್ರೆ ವೆಚ್ಚಗಳಿಂದ ಕಂಗೆಟ್ಟಿರುವ ನಿವೃತ್ತ ಸರ್ಕಾರಿ ನೌಕರರಿಗೆ ಸರ್ಕಾರವು ಸಾಮಾಜಿಕ ಭದ್ರತೆಯ ಕೊಡುಗೆ ನೀಡಿದೆ.

By Meghana Pranuth | ಮೇಘನಾ ಪ್ರಣೂತ್‌

1 min read

WhatsAppPost
Sandhya Kirana Scheme
Sandhya Kirana Scheme

ವಯಸ್ಸಾದ ಕಾಲದಲ್ಲಿ ಎದುರಾಗುವ ಕಠಿಣ ಆರೋಗ್ಯ ಸಮಸ್ಯೆಗಳು ಹಾಗೂ ಗಗನಕ್ಕೇರುತ್ತಿರುವ ಆಸ್ಪತ್ರೆ ವೆಚ್ಚಗಳಿಂದ ಕಂಗೆಟ್ಟಿರುವ ರಾಜ್ಯದ ನಿವೃತ್ತ ಸರ್ಕಾರಿ ನೌಕರರಿಗೆ ಕರ್ನಾಟಕ ಸರ್ಕಾರವು ಭರ್ಜರಿ ಸಾಮಾಜಿಕ ಭದ್ರತೆಯ ಕೊಡುಗೆಯನ್ನು ನೀಡಿದೆ.

ಪಿಂಚಣಿದಾರರು ಮತ್ತು ಅವರ ಅರ್ಹ ಅವಲಂಬಿತ ಕುಟುಂಬ ಸದಸ್ಯರಿಗೆ ಸಮಗ್ರ ವೈದ್ಯಕೀಯ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಸಂಧ್ಯಾ ಕಿರಣ ವಂತಿಕೆ ಆಧಾರಿತ ನಗದುರಹಿತ ಆರೋಗ್ಯ ಯೋಜನೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ನೇತೃತ್ವದ ಸಚಿವ ಸಂಪುಟ ಸಭೆಯು ಮಹತ್ವದ ಅನುಮೋದನೆ ನೀಡಿದೆ.​

ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಮಾರ್ಗಸೂಚಿಗಳ ಅನ್ವಯ ಈ ನೂತನ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, 70 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 3.11 ಲಕ್ಷ ರಾಜ್ಯ ಸರ್ಕಾರಿ ಪಿಂಚಣಿದಾರರು ಇದರ ಲಾಭ ಪಡೆಯಲಿದ್ದಾರೆ. ಇವರೊಂದಿಗೆ ಕುಟುಂಬ ಪಿಂಚಣಿದಾರರು ಮತ್ತು ಅರ್ಹ ಅವಲಂಬಿತ ದಿವ್ಯಾಂಗ ಮಕ್ಕಳನ್ನು ಒಳಗೊಂಡಂತೆ ಒಟ್ಟು 4.93 ಲಕ್ಷ ಫಲಾನುಭವಿಗಳಿಗೆ ಈ ನಗದುರಹಿತ ವೈದ್ಯಕೀಯ ಸೇವೆ ಲಭ್ಯವಾಗಲಿದೆ.

ಈ ಸ್ವಯಂಪ್ರೇರಿತ ಯೋಜನೆಯಡಿ ನೋಂದಾಯಿತಗೊಳ್ಳುವ ಪ್ರತಿ ಅರ್ಹ ಕುಟುಂಬಕ್ಕೆ ವರ್ಷಕ್ಕೆ ಗರಿಷ್ಠ 25 ಲಕ್ಷ ರೂಪಾಯಿಗಳವರೆಗೆ ಫ್ಲೋಟರ್ ಆಧಾರದ ಮೇಲೆ ದ್ವಿತೀಯ, ತೃತೀಯ ಹಾಗೂ ತುರ್ತು ಚಿಕಿತ್ಸಾ ಸೌಲಭ್ಯಗಳನ್ನು ನೋಂದಾಯಿತ ಆಸ್ಪತ್ರೆಗಳಲ್ಲಿ ಉಚಿತವಾಗಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಈ ಮಹತ್ವಾಕಾಂಕ್ಷಿ ಯೋಜನೆಗಾಗಿ ನಿಯಮಿತ ಪಿಂಚಣಿದಾರರು ತಮ್ಮ ಮೂಲ ಪಿಂಚಣಿಯ ಶೇಕಡಾ 1.25 ರಷ್ಟು ಹಾಗೂ ಕುಟುಂಬ ಪಿಂಚಣಿದಾರರು ಮೂಲ ಕುಟುಂಬ ಪಿಂಚಣಿಯ ಶೇಕಡಾ 0.75 ರಷ್ಟು ಅತ್ಯಲ್ಪ ಮಾಸಿಕ ವಂತಿಕೆಯನ್ನು ಪಾವತಿಸಬೇಕಾಗುತ್ತದೆ.

ಇಡೀ ಯೋಜನೆಯ ಒಟ್ಟು ಚಿಕಿತ್ಸಾ ವೆಚ್ಚದಲ್ಲಿ ಶೇಕಡಾ 70 ರಷ್ಟು ಭಾಗವನ್ನು ಫಲಾನುಭವಿಗಳ ವಂತಿಕೆಯಿಂದ ಹಾಗೂ ಉಳಿದ ಶೇಕಡಾ 30 ರಷ್ಟು ಭಾಗವನ್ನು ರಾಜ್ಯ ಸರ್ಕಾರವೇ ಭರಿಸಲಿದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಈ ಯೋಜನೆಯನ್ನು ಅತ್ಯಂತ ಪಾರದರ್ಶಕವಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ನಿವೃತ್ತ ನೌಕರರ ನಿತ್ಯದ ಬದುಕಿನ ಆರ್ಥಿಕ ಹೊರೆಯನ್ನು ಇದು ಗಣನೀಯವಾಗಿ ತಗ್ಗಿಸಲಿದೆ.

Topics

ಸಂಬಂಧಿತ ಸುದ್ದಿಗಳು