ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಕೊನೆಯ ಮೈಲಿಯ ಸಂಪರ್ಕವನ್ನು ಮತ್ತಷ್ಟು ಸುಲಭ ಹಾಗೂ ಡಿಜಿಟಲ್‌ಮಯವಾಗಿಸಲು ಬಿಎಂಟಿಸಿ ವಿನೂತನ ಯೋಜನೆಯೊಂದನ್ನು ರೂಪಿಸಿದೆ. ಮೆಟ್ರೋ ನಿಲ್ದಾಣಗಳ ಸುತ್ತಮುತ್ತಲಿನ ವಸತಿ ಪ್ರದೇಶಗಳಿಗೆ ಸುಲಭ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಒಟ್ಟು 2೦೦ ಹೊಸ ಎಸಿ ಮಿನಿ ಬಸ್‌ಗಳನ್ನು ರಸ್ತೆಗಿಳಿಸಲು ಸಾರಿಗೆ ನಿಗಮ ಸಜ್ಜಾಗುತ್ತಿದೆ.
ಈ ಯೋಜನೆಯ ಅತ್ಯಂತ ವಿಶೇಷವಾದ ಅಂಶವೆಂದರೆ, ಈ ಮಿನಿ ಬಸ್‌ಗಳು ಸಂಪೂರ್ಣವಾಗಿ ನಿರ್ವಾಹಕ ರಹಿತ ಆಗಿರಲಿವೆ. ಮೆಟ್ರೋ ನಿಲ್ದಾಣಗಳ ಮಾದರಿಯಲ್ಲೇ ಬಸ್ಸಿನ ಪ್ರವೇಶ ದ್ವಾರದಲ್ಲಿ ಅತ್ಯಾಧುನಿಕ ಟ್ಯಾಪ್ ಟು ಪೇ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ.
ಪ್ರಯಾಣಿಕರು ತಮ್ಮ ಸ್ಮಾರ್ಟ್ ಕಾರ್ಡ್‌ಗಳು, ಮೊಬೈಲ್ ಆ್ಯಪ್ ಅಥವಾ ಕ್ಯೂಆರ್ ಕೋಡ್‌ಗಳನ್ನು ಬಳಸಿಕೊಂಡು ತಾವೇ ಸ್ವತಃ ಡಿಜಿಟಲ್ ರೂಪದಲ್ಲಿ ಹಣ ಪಾವತಿಸಿ ಟಿಕೆಟ್ ಪಡೆಯಬಹುದು. ಇದರಿಂದಾಗಿ ಸಾರ್ವಜನಿಕ ಸಾರಿಗೆಯಲ್ಲಿ ಪ್ರತಿದಿನ ಎದುರಾಗುವ ಚಿಲ್ಲರೆ ಹಣದ ಕಿರಿಕಿರಿಗೆ ಶಾಶ್ವತ ಮುಕ್ತಿ ಸಿಗಲಿದೆ.
ಈ 7 ಮೀಟರ್ ಉದ್ದದ ಮಿನಿ ಬಸ್‌ಗಳು ಮೆಟ್ರೋ ನಿಲ್ದಾಣಗಳ ಸುತ್ತಮುತ್ತಲಿನ ಕೇವಲ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾತ್ರ ಸಂಚರಿಸಲಿದ್ದು, 5 ರೂಪಾಯಿ ಹಾಗೂ 10 ರೂಪಾಯಿಗಳ ಸ್ಥಿರ ದರವನ್ನು ನಿಗದಿಪಡಿಸಲು ಚಿಂತನೆ ನಡೆಸಲಾಗಿದೆ.
ದೊಡ್ಡ ಬಸ್‌ಗಳು ಸಂಚರಿಸಲು ಸಾಧ್ಯವಾಗದ ಕಿರಿದಾದ ರಸ್ತೆಗಳು ಮತ್ತು ಜನದಟ್ಟಣೆಯ ಲೇಔಟ್‌ಗಳಲ್ಲಿ ಈ ಮಿನಿ ಬಸ್‌ಗಳು ಫೀಡರ್ ಸೇವೆ ನೀಡಲಿವೆ. ಇದಕ್ಕಾಗಿ ನಗರಾಭಿವೃದ್ಧಿ ಭೂ ಸಾರಿಗೆ ನಿರ್ದೇಶನಾಲಯವು ಜಿಐಎಸ್ ಆಧಾರಿತ ಸಮೀಕ್ಷೆ ನಡೆಸಿ ಪ್ರಮುಖ ಮಾರ್ಗಗಳನ್ನು ಸಿದ್ಧಪಡಿಸುತ್ತಿದೆ.
ಈ ಹೊಸ ಡಿಜಿಟಲ್ ಪ್ಲಾನ್‌ನಿಂದಾಗಿ ಪ್ರಯಾಣಿಕರಿಗೆ ಸಮಯ ಉಳಿತಾಯವಾಗುವುದಲ್ಲದೆ, ಕಂಡಕ್ಟರ್‌ಗಳ ಅಗತ್ಯವಿಲ್ಲದ ಕಾರಣ ಬಿಎಂಟಿಸಿ ನಿಗಮಕ್ಕೆ ಸಿಬ್ಬಂದಿ ನಿರ್ವಹಣಾ ವೆಚ್ಚ ಹಾಗೂ ವೇತನದ ವೆಚ್ಚ ಭಾರಿ ಪ್ರಮಾಣದಲ್ಲಿ ಉಳಿತಾಯವಾಗಲಿದೆ. ತಂತ್ರಜ್ಞಾನ ಆಧಾರಿತ ಈ ಸಾರಿಗೆ ವ್ಯವಸ್ಥೆಯು ಬೆಂಗಳೂರಿನ ಸಾರ್ವಜನಿಕ ಸಾರಿಗೆ ಇತಿಹಾಸದಲ್ಲೇ ಹೊಸ ಮೈಲಿಗಲ್ಲಾಗುವ ನಿರೀಕ್ಷೆಯಿದೆ.