ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ಯಾಕೋ ಬಗೆಹರಿಯುವಂತೆಯೇ ಕಾಣುತ್ತಿಲ್ಲ. ಶತಾಯಗತಾಯ ಪ್ರಯತ್ನದ ಬಳಿಕ ರಾಜ್ಯದ ಸಿಎಂ ಸ್ಥಾನ ಅಲಂಕರಿಸಿರುವ ಸಿಎಂ ಡಿ.ಕೆ. ಶಿವಕುಮಾರ್ ಹೆಗಲಿನಿಂದ ಸಂಪುಟ ಕಸರತ್ತಿನ ಭಾರ ಇಳಿಯುವಂತೆ ಕಾಣುತ್ತಿಲ್ಲ. ನಾಳೆ ದೆಹಲಿಗೆ ಪ್ರಯಾಣ ಬೆಳಸಲಿರುವ ಸಿಎಂ ಡಿ.ಕೆ.ಶಿವಕುಮಾರ್ ಪಕ್ಷದ ವರಿಷ್ಠರ ಜೊತೆಯಲ್ಲಿ ನಿಗಮ - ಮಂಡಳಿ ಅಧ್ಯಕ್ಷರ ನೇಮಕಾತಿ ಕುರಿತಂತೆ ಚರ್ಚೆ ನಡೆಸುವ ಜೊತೆಯಲ್ಲಿ ಖಾಲಿ ಇರುವ ಒಂದು ಸಚಿವ ಸ್ಥಾನವನ್ನು ಭರ್ತಿ ಮಾಡುವ ಕುರಿತು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ಖಾಲಿ ಇರುವ ಒಂದು ಸ್ಥಾನಕ್ಕಾಗಿ ತೀವ್ರ ಜಟಾಪಟಿ ಶುರುವಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಕುರುಬರಿಗೆ ಸ್ಥಾನ ಕಡಿಮೆಯಾಗಿದ್ದು, ಈ ಮಂತ್ರಿಸ್ಥಾನವನ್ನು ಬಸವರಾಜ ಶಿವಣ್ಣನವರ್ಗೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಇತ್ತ ಎಂ.ಕೃಷ್ಣಪ್ಪ ಕೂಡ ಸಚಿವ ಸ್ಥಾನ ಪಡೆದುಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ. ಹೀಗಾಗಿ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ಇದೀಗ ಚರ್ಚೆ ನಡೆಸಲು ಹೈಕಮಾಂಡ್ ಜೊತೆ ಭೇಟಿಗೆ ಸಿಎಂ ಡಿ.ಕೆ.ಶಿವಕುಮಾರ್ ಸಿದ್ಧರಾಗಿದ್ದಾರೆ.
ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಿರುವ ಬಗ್ಗೆ ತೀವ್ರ ಅಪಸ್ವರ ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಸಚಿವ ಸ್ಥಾನದಿಂದ ಅವರನ್ನು ಕೆಳಗಿಳಿಸುವ ಬಗ್ಗೆಯೂ ಹೈಕಮಾಂಡ್ ಜೊತೆಯಲ್ಲಿ ಚರ್ಚೆ ನಡೆಯಲಿದೆ. ಅಲ್ಲದೇ ನಾಗೇಂದ್ರ ಜೊತೆಯಲ್ಲಿ ಬಾಲಕೃಷ್ಣ ಅವರಿಗೂ ಮಂತ್ರಿಸ್ಥಾನದಿಂದ ಕೊಕ್ ನೀಡಿ, ಈ ಎರಡು ಸ್ಥಾನಗಳಿಗೆ ಎಂ.ಕೃಷ್ಣಪ್ಪ ಹಾಗೂ ಬಸವರಾಜ ಶಿವಣ್ಣನವರ್ ಅವರನ್ನು ಕೂರಿಸುವ ಲೆಕ್ಕಾಚಾರ ಡಿ.ಕೆ.ಶಿವಕುಮಾರ್ ಅವರದ್ದು ಎನ್ನಲಾಗಿದೆ. ಇದರ ಜೊತೆಯಲ್ಲಿ ಮಹಿಳೆಯರಿಗೂ ಸಚಿವ ಸ್ಥಾನ ನೀಡುವ ಒತ್ತಡ ಡಿ.ಕೆ.ಶಿವಕುಮಾರ್ ಅವರ ಮೇಲಿದ್ದು, ಹೈಕಮಾಂಡ್ ಎದುರು ಲಕ್ಷ್ಮೀ ಹೆಬ್ಬಾಳ್ಕರ್ ಹೆಸರನ್ನು ಡಿಕೆಶಿ ಪ್ರಸ್ತಾಪಿಸುವ ಸಾಧ್ಯತೆಯಿದೆ.
ಒಟ್ನಲ್ಲಿ ನಿಗಮ ಮಂಡಳಿ ಹಾಗೂ ಸಚಿವ ಸ್ಥಾನದ ಎಲ್ಲಾ ಅಪಸ್ವರಗಳಿಗೆ ಮದ್ದು ಅರೆಯಲು ಡಿ.ಕೆ.ಶಿವಕುಮಾರ್ ಸನ್ನದ್ಧರಾಗಿದ್ದಾರೆ. ಸಚಿವ ಸ್ಥಾನ ತಪ್ಪಿದ ಬೇಗುದಿಯಲ್ಲಿರುವವರಿಗೆ ನಿಗಮ ಮಂಡಳಿಯ ಹಾಲಿ ಅಧ್ಯಕ್ಷರಿಂದ ರಾಜೀನಾಮೆ ನೀಡಿಸಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಅಸಮಾಧಾನಿತರಿಗೆ ಕೊಡುವ ಸಾಧ್ಯತೆ ಇದೆ. ಎಲ್ಲದಕ್ಕೂ ಹೈಕಮಾಂಡ್ ಅಂಕಿತಕ್ಕೆ ಸದ್ಯ ಡಿ.ಕೆ.ಶಿವಕುಮಾರ್ ಕಾಯುತ್ತಿದ್ದಾರೆ .