ರಾಜ್ಯ ರಾಜಕಾರಣದಲ್ಲಿ ಇಡಿ ಭಾರಿ ದಾಳಿ : ಸಚಿವ ಸತೀಶ್ ಜಾರಕಿಹೊಳಿ ಆಪ್ತರು, ಬಾಮೈದನ ಮನೆ ಮೇಲೆ ಬೆಳ್ಳಂಬೆಳಗ್ಗೆ ರೈಡ್

ರಾಜ್ಯ ರಾಜಕಾರಣದಲ್ಲಿ ಜಾರಿ ನಿರ್ದೇಶನಾಲಯದ ಬಿಗ್ ಆಪರೇಷನ್ ಮುಂದುವರಿದಿದ್ದು, ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿಗೆ ಬಿಗ್​ಶಾಕ್​ ಎದುರಾಗಿದೆ

By ರಶ್ಮಿ ಎಸ್. | Rashmi S

1 min read

WhatsAppPost
ed-raids-satish-jarkiholi-associates-in-illegal-bar-license-case
ed-raids-satish-jarkiholi-associates-in-illegal-bar-license-case

ರಾಜ್ಯ ರಾಜಕಾರಣದಲ್ಲಿ ಜಾರಿ ನಿರ್ದೇಶನಾಲಯದ ಬಿಗ್ ಆಪರೇಷನ್ ಮುಂದುವರಿದಿದ್ದು, ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿಗೆ ಬಿಗ್​ಶಾಕ್​ ಎದುರಾಗಿದೆ. ಹೌದು! ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಅಧಿಕಾರಿಗಳು ಬೆಳ್ಳಂ ಬೆಳಗ್ಗೆ ಹಠಾತ್ ದಾಳಿ ನಡೆಸಿದ್ದಾರೆ. ಅನಧಿಕೃತ ಬಾರ್ ಲೈಸೆನ್ಸ್ ಹಂಚಿಕೆ ಮತ್ತು ಅದಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ಹಿನ್ನೆಲೆಯಲ್ಲಿ, ಬೆಂಗಳೂರು, ಬೆಳಗಾವಿ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಪ್ರಮುಖ ಸ್ಥಳಗಳಲ್ಲಿ ಬೆಳ್ಳಂಬೆಳಗ್ಗೆ ಏಕಕಾಲಕ್ಕೆ ಶೋಧ ಕಾರ್ಯಾಚರಣೆ ಆರಂಭವಾಗಿದೆ. ಸಿಆರ್‌ಪಿಎಫ್ ಯೋಧರ ಬಿಗಿ ಕಾವಲಿನಲ್ಲಿ ಈ ಬೃಹತ್ ತನಿಖೆ ಪ್ರಗತಿಯಲ್ಲಿದೆ.

ಈ ಇಡಿ ಕಾರ್ಯಾಚರಣೆಯು ಮುಖ್ಯವಾಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಬಾಮೈದ ಹಾಗೂ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿರುವ ವೈ. ಮಂಜುನಾಥ್ ಅವರನ್ನು ಗುರಿಯಾಗಿಸಿಕೊಂಡು ನಡೆದಿದೆ. ನಿಯಮಗಳನ್ನು ಗಾಳಿಗೆ ತೂರಿ ಸುಮಾರು 18 ಹೊಸ ಬಾರ್‌ಗಳಿಗೆ ಅನಧಿಕೃತವಾಗಿ ಪರವಾನಗಿ ಕೊಡಿಸಲು ಸಚಿವರು ತಮ್ಮ ರಾಜಕೀಯ ಪ್ರಭಾವ ಬಳಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದರೊಂದಿಗೆ, ಈ ವ್ಯವಹಾರದಿಂದ ಬಂದ ನೂರಾರು ಕೋಟಿ ರೂಪಾಯಿ ಹಣವನ್ನು ಅಕ್ರಮ ಮಾರ್ಗಗಳ ಮೂಲಕ ವಿದೇಶಗಳಲ್ಲಿ ಹೂಡಿಕೆ ಮಾಡಲು ಸಚಿವರ ಆಪ್ತ ವಲಯ ನೆರವಾಗಿದೆ ಎಂಬ ಶಂಕೆಯೂ ವ್ಯಕ್ತವಾಗಿದೆ.

ಈ ಹಿಂದೆ ನಡೆದ ತನಿಖೆಯ ವೇಳೆ ಇವರ ಜಾಲದಿಂದ ಸುಮಾರು 3 ಕೋಟಿ ರೂಪಾಯಿಗೂ ಅಧಿಕ ಮೊತ್ತದ ವಿದೇಶಿ ವಿನಿಮಯ ವ್ಯವಹಾರ ಹಾಗೂ ಅಕ್ರಮ ಆಸ್ತಿಯ ಲಿಂಕ್‌ಗಳು ಪತ್ತೆಯಾಗಿದ್ದವು. ಸದ್ಯ ಅಧಿಕಾರಿಗಳು ಮಂಜುನಾಥ್ ಮತ್ತು ಅವರ ಆಪ್ತರ ನಿವಾಸಗಳಲ್ಲಿ ಮಹತ್ವದ ಡಿಜಿಟಲ್ ಪುರಾವೆಗಳು, ಬ್ಯಾಂಕ್ ಖಾತೆಗಳ ದಾಖಲೆಗಳು ಹಾಗೂ ಬೆಲೆಬಾಳುವ ಆಸ್ತಿ ಪತ್ರಗಳನ್ನು ಜಾಲಾಡುತ್ತಿದ್ದಾರೆ. ಇತ್ತೀಚಿನ ದಾಳಿಗಳಲ್ಲಿ ಕೋಟ್ಯಂತರ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದ್ದು, ಈಗಿನ ಕಾರ್ಯಾಚರಣೆಯು ಸಚಿವ ಸತೀಶ್ ಜಾರಕಿಹೊಳಿ ಅವರ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಹಾಗೂ ಆತಂಕ ಮೂಡಿಸಿದೆ.

Topics

ಸಂಬಂಧಿತ ಸುದ್ದಿಗಳು