ಎಡಕುಮೇರಿ ಗುಡ್ಡ ಕುಸಿತ ಎಫೆಕ್ಟ್​ : 80ಕ್ಕೂ ಅಧಿಕ ವಿದ್ಯಾರ್ಥಿಗಳ ​ಕಾಸ್ಟೇಬಲ್​ ಹುದ್ದೆ ಕನಸು ಭಗ್ನ

ಪರೀಕ್ಷಾ ದಿನಾಂಕವನ್ನು 10 ದಿನ ಮೊದಲೇ ಪ್ರಕಟಿಸಲಾಗಿದ್ದು, ವಿದ್ಯಾರ್ಥಿಗಳು 1 ದಿನ ಮುಂಚಿತವಾಗಿ ಪರೀಕ್ಷಾ ಕೇಂದ್ರವಿರುವ ಊರಿನಲ್ಲಿ ಹಾಜರಿರಬೇಕಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.

By ರಶ್ಮಿ ಎಸ್. | Rashmi S

1 min read

WhatsAppPost
yedakumari landslide constable exam candidates affected
yedakumari landslide constable exam candidates affected

ಬೆಂಗಳೂರು : ಪಶ್ಚಿಮ ಘಟ್ಟದ ಎಡಕುಮೇರಿ ಬಳಿ ಸಂಭವಿಸಿದ ಭೀಕರ ಭೂಕುಸಿತದಿಂದಾಗಿ 8೦ಕ್ಕೂ ಹೆಚ್ಚು ಗ್ರಾಮೀಣ ಅಭ್ಯರ್ಥಿಗಳ ಪೊಲೀಸ್ ಕಾನ್‌ಸ್ಟೇಬಲ್ ಆಗುವ ಕನಸು ನುಚ್ಚುನೂರಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಭಾನುವಾರ ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ಲಿಖಿತ ನೇಮಕಾತಿ ಪರೀಕ್ಷೆಗೆ ಹಾಜರಾಗಲು ಹೊರಟಿದ್ದ ಯುವಕರು, ರೈಲು ಸಂಚಾರ ಹಠಾತ್ ಸ್ಥಗಿತಗೊಂಡಿದ್ದರಿಂದ ಪರೀಕ್ಷಾ ಕೇಂದ್ರವನ್ನು ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗದೆ ತಮ್ಮ ಅವಕಾಶವನ್ನು ಕಳೆದುಕೊಂಡು ಕಣ್ಣೀರು ಹಾಕಿದ್ದಾರೆ.

ವರದಿಗಳ ಪ್ರಕಾರ, ಶನಿವಾರ ರಾತ್ರಿ ಮಂಗಳೂರು-ಬೆಂಗಳೂರು ಮಾರ್ಗದಲ್ಲಿ ಚಲಿಸುತ್ತಿದ್ದ ಪ್ರಮುಖ ರೈಲುಗಳು ಘಾಟ್ ಸೆಕ್ಷನ್‌ನ ದಟ್ಟ ಅರಣ್ಯದ ಮಧ್ಯದಲ್ಲೇ ದೀರ್ಘಕಾಲದವರೆಗೆ ನಿಂತಿದ್ದವು. ಗಂಟೆಗಟ್ಟಲೆ ಆತಂಕದಿಂದ ಕಾಯ್ದ ಅಭ್ಯರ್ಥಿಗಳು ಕೊನೆಗೆ ರೈಲಿನಿಂದ ಇಳಿದು ಬಸ್ ಅಥವಾ ಖಾಸಗಿ ವಾಹನಗಳ ಮೂಲಕ ಪರ್ಯಾಯ ಮಾರ್ಗಗಳಿಂದ ಪ್ರಯಾಣಿಸಲು ತೀವ್ರವಾಗಿ ಯತ್ನಿಸಿದರೂ ನಿಗದಿತ ಪರೀಕ್ಷೆ ಆರಂಭವಾಗುವ ವೇಳೆಗೆ ಹಾಜರಾಗಲು ಸಂಪೂರ್ಣವಾಗಿ ವಿಫಲರಾಗಿದ್ದಾರೆ.

ಕೊನೆಯ ಕ್ಷಣದಲ್ಲಿ ಹತ್ತಿರದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ವಿನಂತಿಸಿದರಾದರೂ ಹೆಚ್ಚುವರಿ ಪ್ರಶ್ನೆ ಪತ್ರಿಕೆಗಳ ಕೊರತೆಯಿಂದಾಗಿ ಅಲ್ಲಿನ ಅಧಿಕಾರಿಗಳು ಕೈಚೆಲ್ಲಿದರು. ತಿಂಗಳುಗಟ್ಟಲೆ ಹಗಲಿರುಳು ಶ್ರಮವಹಿಸಿ ಸಿದ್ಧತೆ ನಡೆಸಿದ್ದ ಆಕಾಂಕ್ಷಿಗಳಿಗೆ ಈ ಭೀಕರ ನೈಸರ್ಗಿಕ ವಿಕೋಪವು ತೀವ್ರ ಆಘಾತ ಮೂಡಿಸಿದೆ.

ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಮತ್ತು ನೊಂದ ಅಭ್ಯರ್ಥಿಗಳ ನಡುವೆ ತೀವ್ರ ಭಿನ್ನಾಭಿಪ್ರಾಯ ಮೂಡಿದೆ. ಜಿಲ್ಲಾಡಳಿತ ಹಾಗೂ ಪರೀಕ್ಷಾ ಮಂಡಳಿಯ ಹಿರಿಯ ಅಧಿಕಾರಿಗಳು ಅಭ್ಯರ್ಥಿಗಳ ಮುನ್ನೆಚ್ಚರಿಕೆಯ ಕೊರತೆಯನ್ನು ಎತ್ತಿ ತೋರಿಸಿದ್ದಾರೆ.

ಪರೀಕ್ಷಾ ದಿನಾಂಕವನ್ನು 10 ದಿನ ಮೊದಲೇ ಪ್ರಕಟಿಸಲಾಗಿದ್ದು, ವಿದ್ಯಾರ್ಥಿಗಳು 1 ದಿನ ಮುಂಚಿತವಾಗಿ ಪರೀಕ್ಷಾ ಕೇಂದ್ರವಿರುವ ಊರಿನಲ್ಲಿ ಹಾಜರಿರಬೇಕಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಅಸಹಾಯಕ ಅಭ್ಯರ್ಥಿಗಳು ಸರ್ಕಾರದ ತುರ್ತು ನಿರ್ವಹಣಾ ವ್ಯವಸ್ಥೆ ಹಾಗೂ ಪರ್ಯಾಯ ಮಾರ್ಗಸೂಚಿಗಳ ಕೊರತೆಯನ್ನು ಪ್ರಶ್ನಿಸಿದ್ದು , ಇಂತಹ ತುರ್ತು ಪರಿಸ್ಥಿತಿ ಸಂಭವಿಸುವ ಬಗ್ಗೆ ಯಾವುದೇ ಮಾರ್ಗಸೂಚಿಗಳನ್ನು ನಮಗೆ ನೀಡಲಾಗಿರಲಿಲ್ಲ ಎಂದು ಹೇಳಿದ್ದಾರೆ.

Topics

ಸಂಬಂಧಿತ ಸುದ್ದಿಗಳು