Kannada News Next

karnataka

Free Bus : ಸರಕಾರಿ ಬಸ್‌ಗಳ ಉಚಿತ ಪ್ರಯಾಣಕ್ಕೆ ಸ್ಮಾರ್ಟ್‌ಕಾರ್ಡ್‌

ಸಾರಿಗೆ ಇಲಾಖೆಯ ವ್ಯಾಪ್ತಿಗೆ ಒಳಪಡುವ ನಾಲ್ಕೂ ನಿಗಮಗಳಲ್ಲಿ ಶೀಘ್ರದಲ್ಲಿಯೇ ಸುಮಾರು ಒಂದು ಕೋಟಿ ಸ್ಮಾರ್ಟ್‌ಕಾರ್ಡ್‌ಗಳನ್ನು ವಿತರಿಸಲು ಸರ್ಕಾರ ಯೋಜಿಸಿದೆ.

By ರಶ್ಮಿ ಎಸ್. | Rashmi S
free bus smart card karnataka government bus

ಬೆಂಗಳೂರು : ಕರ್ನಾಟಕ ಸರ್ಕಾರವು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆಯೊಂದನ್ನು ತರಲು ಮುಂದಾಗಿದೆ. ಬೆಂಗಳೂರಿನ ನಮ್ಮ ಮಟ್ರೋ ಮಾದರಿಯಲ್ಲೇ ಇನ್ನು ಮುಂದೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲೂ ಸ್ಮಾರ್ಟ್‌ಕಾರ್ಡ್ ವ್ಯವಸ್ಥೆಯನ್ನು ಜಾರಿಗೆ ತರಲು ಸಿದ್ಧತೆ ನಡೆಸಲಾಗುತ್ತಿದೆ.

ಸಾರಿಗೆ ಇಲಾಖೆಯ ವ್ಯಾಪ್ತಿಗೆ ಒಳಪಡುವ ನಾಲ್ಕೂ ನಿಗಮಗಳಲ್ಲಿ ಶೀಘ್ರದಲ್ಲಿಯೇ ಸುಮಾರು ಒಂದು ಕೋಟಿ ಸ್ಮಾರ್ಟ್‌ಕಾರ್ಡ್‌ಗಳನ್ನು ವಿತರಿಸಲು ಸರ್ಕಾರ ಯೋಜಿಸಿದೆ. ಈ ಯೋಜನೆಯನ್ನು ಕೇವಲ ಮಹಿಳೆಯರಿಗಷ್ಟೇ ಸೀಮಿತಗೊಳಿಸದೆ, ಪುರುಷ ಪ್ರಯಾಣಿಕರಿಗೂ ವಿಸ್ತರಿಸಲು ತೀರ್ಮಾನಿಸಿರುವುದು ವಿಶೇಷವಾಗಿದೆ.

ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣಿಸುವ ಮಹಿಳಾ ಫಲಾನುಭವಿಗಳಿಗೆ ಸ್ಮಾರ್ಟ್‌ಕಾರ್ಡ್ ನೀಡುವ ಪ್ರಸ್ತಾಪ ಮೊದಲಿನಿಂದಲೂ ಇತ್ತು. ಈಗ ಅದರ ಜೊತೆಗೆ ಇತರ ಸಾಮಾನ್ಯ ಪ್ರಯಾಣಿಕರಿಗೂ ಇದರ ಸೌಲಭ್ಯ ಸಿಗಲಿದೆ. ಮಹಿಳೆಯರಿಗೆ ಈ ಕಾರ್ಡ್ ಮೂಲಕ ಎಂದಿನಂತೆ ಉಚಿತ ಪ್ರಯಾಣ ಇರಲಿದ್ದು, ಇತರ ಪ್ರಯಾಣಿಕರು ಹಣ ಪಾವತಿಸಿ ಕಾರ್ಡ್ ಅನ್ನು ರೀಚಾರ್ಜ್ ಮಾಡಿಸಿಕೊಂಡು ಬಳಸಬೇಕಾಗುತ್ತದೆ.

ಬಸ್ ಹತ್ತಿದಾಗ ನಿರ್ವಾಹಕರು ಬಳಸುವ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಕ್ಕೆ ಈ ಕಾರ್ಡ್ ಅನ್ನು ತೋರಿಸಿ ಪ್ರಯಾಣಿಸಬಹುದಾಗಿದೆ.ಈ ನೂತನ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯಿಂದಾಗಿ ಸರ್ಕಾರಕ್ಕೆ ಶಕ್ತಿ ಯೋಜನೆಯ ಫಲಾನುಭವಿಗಳ ನಿಖರವಾದ ಮಾಹಿತಿ ಲಭ್ಯವಾಗಲಿದೆ.

ಅಲ್ಲದೆ ಉಚಿತ ಪ್ರಯಾಣ ಸೌಲಭ್ಯವು ದುರುಪಯೋಗವಾಗುವುದನ್ನು ತಡೆಯಲು ಇದು ಸಹಕಾರಿಯಾಗಲಿದೆ. ಸಾರಿಗೆ ಸಂಸ್ಥೆಯ ದೈನಂದಿನ ಪ್ರಯಾಣ ದರ ವಸೂಲಾತಿ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಹಾಗೂ ಸುಲಭವಾಗಿಸುವುದು ಈ ಹೊಸ ಯೋಜನೆಯ ಮುಖ್ಯ ಉದ್ದೇಶವಾಗಿದೆ.