Kannada News Next

karnataka

ಗೃಹಜ್ಯೋತಿ ಯೋಜನೆಯಲ್ಲಿ ಉಚಿತ ವಿದ್ಯುತ್ ಪಡೆಯುವವರಿಗೆ ಕೊನೆಯ ಅವಕಾಶ: ಈ ಕೆಲಸ ಇಂದೇ ಮಾಡಿ

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳಿಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ

By ಅನಿಲ್‌ ಗುಂಡ್ಮಿ | Anil Gundmi
Gruha Jyothi Scheme Around 1.3 Lakh Consumers Out From Benefit 1

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳಿಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ ಮಹತ್ವದ ಮಾಹಿತಿ ನೀಡಿದೆ.

ಮನೆಮನೆಗೆ ತೆರಳಿ ದಾಖಲೆ ಪರಿಶೀಲನೆ ನಡೆಸುವ ವೇಳೆ ಬೆಸ್ಕಾಂ ಸಿಬ್ಬಂದಿ ನಿಮ್ಮ ಮನೆಗೆ ಬಂದಾಗ ನೀವು ಮನೆಯಲ್ಲಿ ಇರದಿದ್ದರೆ ಅಥವಾ ಮನೆ ಬಾಗಿಲು ಲಾಕ್ ಆಗಿದ್ದರೆ ಆತಂಕಪಡುವ ಅಗತ್ಯವಿಲ್ಲ.

ದಾಖಲೆ ಪರಿಶೀಲನೆ ಹಾಗೂ ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ಅಕ್ಟೋಬರ್ 31ರವರೆಗೆ ಹೆಚ್ಚುವರಿ ಅವಕಾಶ ನೀಡಲಾಗಿದೆ. ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಅರ್ಹತೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಬೆಸ್ಕಾಂ ಅಧಿಕಾರಿಗಳು ರಾಜ್ಯಾದ್ಯಂತ ಮನೆಮನೆಗೆ ತೆರಳಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

ಆದರೆ ಅನೇಕ ಮನೆಗಳು ಲಾಕ್ ಆಗಿದ್ದರಿಂದ ಅಥವಾ ಫಲಾನುಭವಿಗಳು ಸ್ಥಳದಲ್ಲಿರದ ಕಾರಣ ಪರಿಶೀಲನೆ ಪೂರ್ಣಗೊಳ್ಳದೇ ಉಳಿದಿದೆ. ಈ ಹಿನ್ನೆಲೆಯಲ್ಲಿ, ಯಾವುದೇ ಅರ್ಹ ಫಲಾನುಭವಿ ಯೋಜನೆಯ ಲಾಭದಿಂದ ವಂಚಿತರಾಗದಂತೆ ಬೆಸ್ಕಾಂ ಮತ್ತೊಮ್ಮೆ ಅವಕಾಶ ಕಲ್ಪಿಸಿದೆ. ಈ ಕುರಿತು ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳ ಮೂಲಕವೂ ಮಾಹಿತಿ ಪ್ರಕಟಿಸಿದೆ.

ದಾಖಲೆ ಪರಿಶೀಲನೆ ಎಲ್ಲಿ ಮಾಡಿಸಬೇಕು:

ಮನೆಗೆ ಬಂದ ಬೆಸ್ಕಾಂ ಸಿಬ್ಬಂದಿಯಿಂದ ಪರಿಶೀಲನೆ ಮಾಡಿಸಿಕೊಳ್ಳಲು ಸಾಧ್ಯವಾಗದ ಫಲಾನುಭವಿಗಳು ಅಕ್ಟೋಬರ್ 31ರೊಳಗೆ ತಮ್ಮ ಸಮೀಪದ ಬೆಸ್ಕಾಂ ಉಪವಿಭಾಗ (Subdivision) ಕಚೇರಿಗೆ ಭೇಟಿ ನೀಡಿ ದಾಖಲೆ ಪರಿಶೀಲನೆ ಹಾಗೂ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

ಯಾವ ದಾಖಲೆಗಳು ಬೇಕಾಗಬಹುದು?

ದಾಖಲೆ ಪರಿಶೀಲನೆ ವೇಳೆ ಈ ಕೆಳಗಿನ ದಾಖಲೆಗಳನ್ನು ಸಲ್ಲಿಸುವಂತೆ ಕೇಳಬಹುದು:

ಆಧಾರ್ ಕಾರ್ಡ್

ಪ್ಯಾನ್ ಕಾರ್ಡ್

ಮತದಾರರ ಗುರುತಿನ ಚೀಟಿ (Voter ID)

ಅಗತ್ಯವಿರುವ ಇತರೆ ಗುರುತಿನ ದಾಖಲೆಗಳು

ಆದ್ದರಿಂದ ಕಚೇರಿಗೆ ತೆರಳುವ ಮೊದಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಬೆಸ್ಕಾಂ ಸೂಚಿಸಿದೆ.

ಅಕ್ಟೋಬರ್ 31 ಕೊನೆಯ ದಿನ:

ಪ್ರಸ್ತುತ ಬೆಸ್ಕಾಂ, ಪ್ರತಿ ತಿಂಗಳು 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯುತ್ತಿರುವ ಗ್ರಾಹಕರ ದಾಖಲೆಗಳನ್ನು ಪರಿಶೀಲಿಸುತ್ತಿದೆ. ನಿಗದಿತ ಅವಧಿಯೊಳಗೆ ಪರಿಶೀಲನೆ ಪೂರ್ಣಗೊಳಿಸದ ಫಲಾನುಭವಿಗಳ ಪ್ರಕರಣಗಳನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಬಹುದಾಗಿದೆ.

ಹೀಗಾಗಿ ಇನ್ನೂ ದಾಖಲೆ ಪರಿಶೀಲನೆ ಬಾಕಿ ಇರುವ ಫಲಾನುಭವಿಗಳು ಕೊನೆಯ ದಿನದವರೆಗೆ ಕಾಯದೆ, ಸಾಧ್ಯವಾದಷ್ಟು ಬೇಗ ಸಮೀಪದ ಬೆಸ್ಕಾಂ ಉಪವಿಭಾಗ ಕಚೇರಿಗೆ ಭೇಟಿ ನೀಡಿ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಉತ್ತಮ.

 1.3 ಲಕ್ಷ ಗ್ರಾಹಕರು ಯೋಜನೆಯಿಂದ ಹೊರಬಂದಿದ್ದಾರೆ:

ಈ ನಡುವೆ, ವೈಯಕ್ತಿಕ ದಾಖಲೆಗಳನ್ನು ಸಲ್ಲಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸುಮಾರು 1.3 ಲಕ್ಷ ಗ್ರಾಹಕರು ಗೃಹಜ್ಯೋತಿ ಯೋಜನೆಯಿಂದ ಸ್ವಯಂಪ್ರೇರಿತವಾಗಿ ಹೊರಬಂದಿದ್ದಾರೆ ಎಂದು ವರದಿಯಾಗಿದೆ. ಇವರಲ್ಲಿ ಸುಮಾರು 1.2 ಲಕ್ಷ ಗ್ರಾಹಕರು ಬೆಸ್ಕಾಂ ವ್ಯಾಪ್ತಿಗೆ ಸೇರಿದವರಾಗಿದ್ದಾರೆ ಎಂದು ಈ ಹಿಂದಿನ ವರದಿಗಳು ತಿಳಿಸಿವೆ.