ಬರದ ಏಟಿಗೆ ರಾಜ್ಯದಲ್ಲಿ ಭತ್ತದ ಕೊರತೆ :ಮುಚ್ಚುವ ಭೀತಿಯಲ್ಲಿ 2 ಸಾವಿರಕ್ಕೂ ಅಧಿಕ ರೈಸ್​ಮಿಲ್ಸ್

ನೀರಿನ ಕೊರತೆಯಿಂದಾಗಿ ಈ ಬಾರಿ ಭತ್ತದ ಬಿತ್ತನೆ ಪ್ರಮಾಣ ಶೇಕಡಾ 50 ಕ್ಕಿಂತಲೂ ಅಧಿಕ ಕುಸಿದಿದ್ದು, ಮಾರುಕಟ್ಟೆಗೆ ಭತ್ತದ ಆವಕ ಗಣನೀಯವಾಗಿ ಕಡಿಮೆಯಾಗಿದೆ.

By ರಶ್ಮಿ ಎಸ್. | Rashmi S

1 min read

WhatsAppPost
Karnataka drought paddy shortage rice mills verge of closure
Karnataka drought paddy shortage rice mills verge of closure

ರಾಜ್ಯದಲ್ಲಿ ತಲೆದೋರಿರುವ ತೀವ್ರ ಮಳೆಯ ಅಭಾವ ಮತ್ತು ಭೀಕರ ಬರಗಾಲವು ಕೃಷಿ ವಲಯದ ಜೊತೆಗೆ ಅಕ್ಕಿ ಸಂಸ್ಕರಣಾ ಉದ್ಯಮಕ್ಕೂ ಭಾರಿ ಪೆಟ್ಟು ನೀಡಿದೆ. ನೀರಿನ ಕೊರತೆಯಿಂದಾಗಿ ಈ ಬಾರಿ ಭತ್ತದ ಬಿತ್ತನೆ ಪ್ರಮಾಣ ಶೇಕಡಾ 50 ಕ್ಕಿಂತಲೂ ಅಧಿಕ ಕುಸಿದಿದ್ದು, ಮಾರುಕಟ್ಟೆಗೆ ಭತ್ತದ ಆವಕ ಗಣನೀಯವಾಗಿ ಕಡಿಮೆಯಾಗಿದೆ.

ಇದರ ನೇರ ಪರಿಣಾಮವಾಗಿ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ 2,400ಕ್ಕೂ ಹೆಚ್ಚು ರೈಸ್ ಮಿಲ್‌ಗಳು ಭಾರಿ ನಷ್ಟ ಅನುಭವಿಸುತ್ತಿದ್ದು, ಮುಚ್ಚುವ ಹಂತಕ್ಕೆ ತಲುಪಿವೆ.

ಸಾಮಾನ್ಯ ದಿನಗಳಲ್ಲಿ ಪ್ರತಿ ಗಿರಣಿಯಲ್ಲಿ ದಿನಕ್ಕೆ 30 ರಿಂದ 50 ಟನ್ ಅಕ್ಕಿ ತಯಾರಾಗುತ್ತಿತ್ತು. ಆದರೆ ಪ್ರಸ್ತುತ ಕಚ್ಚಾ ವಸ್ತುವಿನ ಕೊರತೆಯಿಂದಾಗಿ ಉತ್ಪಾದನಾ ಸಾಮರ್ಥ್ಯವು ಕೇವಲ ಶೇಕಡಾ 20 ಕ್ಕೆ ಇಳಿದಿದೆ.

ರಾಜ್ಯದ ಪ್ರಮುಖ ಭತ್ತದ ಕಣಜಗಳಾದ ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಈ ಬಿಕ್ಕಟ್ಟು ತೀವ್ರವಾಗಿದೆ. ಈ ಭಾಗದಿಂದ ದುಬೈ, ಅಮೆರಿಕ, ಸಿಂಗಾಪುರ ಮುಂತಾದ ವಿದೇಶಗಳಿಗೆ ಆಗುತ್ತಿದ್ದ ಅಕ್ಕಿ ರಫ್ತು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರಿಂದಾಗಿ ಜಾಗತಿಕ ವ್ಯಾಪಾರಿಗಳು ಅಕ್ಕಿ ಖರೀದಿಗಾಗಿ ಉತ್ತರ ಪ್ರದೇಶ, ಪಂಜಾಬ್ ಮತ್ತು ಗುಜರಾತ್‌ನಂತಹ ಇತರ ರಾಜ್ಯಗಳತ್ತ ಮುಖ ಮಾಡುತ್ತಿದ್ದಾರೆ.

ಉತ್ಪಾದನೆ ಕುಂಠಿತಗೊಂಡಿರುವುದರಿಂದ ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆಸುತ್ತಿದ್ದ ಗಿರಣಿಗಳ ಆದಾಯ ಶೇಕಡಾ 70 ರಷ್ಟು ಕುಸಿದಿದೆ. ಮಾಲೀಕರಿಗೆ ಗಿರಣಿ ನಿರ್ವಹಣೆ, ಸಾಗಣೆ ವೆಚ್ಚ ಹಾಗೂ ಕಾರ್ಮಿಕರ ವೇತನ ಪಾವತಿಸುವುದೇ ದೊಡ್ಡ ಹೊರೆಯಾಗಿದೆ.

ಕೆಲಸವಿಲ್ಲದೆ ಸಾವಿರಾರು ಕಾರ್ಮಿಕರು ಅತಂತ್ರರಾಗಿದ್ದು, ಉದ್ಯಮವನ್ನು ರಕ್ಷಿಸಲು ಸರ್ಕಾರವು ಕನಿಷ್ಠ ವಿದ್ಯುತ್ ಶುಲ್ಕದಲ್ಲಾದರೂ ರಿಯಾಯಿತಿ ನೀಡಿ ನೆರವಾಗಬೇಕು ಎಂದು ಅಕ್ಕಿ ಗಿರಣಿ ಮಾಲೀಕರ ಸಂಘ ಮನವಿ ಮಾಡಿದೆ.

Topics

ಸಂಬಂಧಿತ ಸುದ್ದಿಗಳು