ಬೆಂಗಳೂರು : ಗೃಹಲಕ್ಷ್ಮೀ ಯೋಜನೆ ಕುರಿತು ಕರ್ನಾಟಕದ ಕಾಂಗ್ರೆಸ್ ಸರಕಾರ ಪರಿಶೀಲನೆ ನಡೆಸುತ್ತಿದೆ. ಅರ್ಹ ಫಲಾನುಭವಿಗಳಿಗೆ ಮಾತ್ರವೇ ಯೋಜನೆಯ ಲಾಭ ಸಿಗಬೇಕು ಅನ್ನೋ ಕಾರಣದಿಂದಲೇ ಹಲವು ಹೊಸ ರೂಲ್ಸ್‌ಗಳನ್ನು ಜಾರಿ ಮಾಡಿದೆ. ಇನ್ಮುಂದೆ ಗೃಹಲಕ್ಷ್ಮೀ ಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿಸೋದಕ್ಕೆ ಹಲವು ನಿಯಮಗಳನ್ನು ಜಾರಿ ಮಾಡಲಾಗಿದ್ದು, ಈ ಕೆಳಗಿನ ದಾಖಲೆಗಳನ್ನು ನೀಡಿದ್ರೆ ಮಾತ್ರವೇ ಪ್ರತೀ ತಿಂಗಳು 2000 ರೂಪಾಯಿ ಹಣ ಸಿಗಲಿದೆ.
ಅನರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡುವ ಸಲುವಾಗಿ ಕೇಂದ್ರ ಚುನಾವಣಾ ಆಯೋಗ ಎಸ್‌ಐಆರ್ ಪ್ರಕ್ರಿಯೆ ನಡೆಸುತ್ತಿದೆ. ಕರ್ನಾಟಕದ ಕಾಂಗ್ರೆಸ್ ಸರಕಾರ ಕೂಡ ಗೃಹಲಕ್ಷ್ಮೀ ಯೋಜನೆಯ ಅನರ್ಹ ಫಲಾನುಭವಿಗಳನ್ನು ಕಿತ್ತು ಹಾಕಲು ಗೃಹಲಕ್ಷ್ಮೀ ಯೋಜನೆಯ ಮರು ಪರಿಶೀಲನಾ ಕಾರ್ಯ ನಡೆಸುತ್ತಿದೆ. ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಆಪ್‌ನಲ್ಲಿ ಸರ್ವೇ ಆದರೂ ಕೂಡ ಆಫ್‌ಲೈನ್‌ನಲ್ಲಿ ಕಡ್ಡಾಯವಾಗಿ ಮರುಪರಿಶೀಲನಾ ಕಾರ್ಯ ನಡೆಸಲೇ ಬೇಕಾಗಿದೆ.
ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಮರು ಪರಿಶೀಲನೆ ನಡೆಸುತ್ತಿದ್ದು, ಈ ವೇಳೆಯಲ್ಲಿ ಹಲವು ನಿಯಮಗಳನ್ನು ಕಡ್ಡಾಯಗೊಳಿಸಲಾಗಿದೆ. ಗೃಹಲಕ್ಷ್ಮೀ ಯೋಜನೆಯಿಂದ ಮಾಸಿಕ 2000 ರೂಪಾಯಿ ಪಡೆಯುತ್ತಿರುವ ಯಜಮಾನಿಯರು, ಕರ್ನಾಟಕದಲ್ಲಿ ಶಾಖೆ ಹೊಂದಿರುವ ಬ್ಯಾಂಕಿನ ಖಾತೆಯನ್ನು ಮಾತ್ರವೇ ನೀಡಬೇಕಾಗಿದೆ. ಅದು ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಆಗಿದ್ದರೂ ಕೂಡ, ಅದರ ಶಾಖೆ ಕರ್ನಾಟಕದಲ್ಲಿ ಇರುವುದು ಕಡ್ಡಾಯಗೊಳಿಸಲಾಗಿದೆ.
ನೀವು ಯಾವುದಾದರೂ ಬ್ಯಾಂಕಿನಲ್ಲಿ ಸಾಲ ಮಾಡಿದ್ರೆ, ಅಂತಹ ಬ್ಯಾಂಕಿನ ಖಾತೆಯ ಮಾಹಿತಿಯನ್ನು ಗೃಹಲಕ್ಷ್ಮೀ ಯೋಜನೆಗೆ ಒದಗಿಸಬಾರದು. ಬದಲಾಗಿ ಸಾಲ ಇರದ ಖಾತೆಯ ಮಾಹಿತಿ ನೀಡುವುದು ಕಡ್ಡಾಯಗೊಳಿಸಲಾಗಿದೆ. ಆಧಾರ್ ಸಂಖ್ಯೆಗೆ ಮೊಬೈಲ್ ಜೋಡಣೆ ಮಾಡುವುದನ್ನು ಕಡ್ಡಾಯಗೊಳಿಸಲಾಗುವುದು ಸೇರಿದಂತೆ ಹಲವು ರೂಲ್ಸ್‌ಗಳನ್ನು ಸೇರ್ಪಡೆ ಮಾಡಲಾಗಿದೆ.
ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಪಿಂಚಣಿಯನ್ನು ಪಡೆಯುತ್ತಿದ್ದರೆ ಆ ಮಾಹಿತಿಯನ್ನೂ ಕೂಡ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಸದ್ಯ ಗೃಹಲಕ್ಷ್ಮೀ ಯೋಜನೆಯ ಪುನರ್ ಪರಿಶೀಲನೆಯಲ್ಲಿ ಸಾವಿರಾರು ಅನರ್ಹ ಫಲಾನುಭವಿಗಳು ಡಿಲೀಟ್ ಆಗುವುದು ಪಕ್ಕಾ.