News Next Kannada

karnataka

Gruhalakshmi Big Update : ಗೃಹಲಕ್ಷ್ಮೀ ಫಲಾನುಭವಿಗಳಿಗೆ ಬಿಗ್​ ಅಪ್​ಡೇಟ್​ : ಯೋಜನೆ ಮರುಪರಿಶೀಲನೆಗೆ ಹೊಸ ಆ್ಯಪ್​

ಕರ್ನಾಟಕ ಸರ್ಕಾರದ ಜನಪ್ರಿಯ 'ಗೃಹಲಕ್ಷ್ಮಿ' ಯೋಜನೆಯ ದುರುಪಯೋಗವನ್ನು ತಡೆಯಲು ಮತ್ತು ಅರ್ಹರನ್ನು ಮರುಪರಿಶೀಲಿಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

By Arun Gundmi | ಅರುಣ್‌ ಗುಂಡ್ಮಿ Editor-in-Chief
Gruhalakshmi beneficiaries big update new app for scheme reverification

ಬೆಂಗಳೂರು : ಕರ್ನಾಟಕ ಸರ್ಕಾರದ ಜನಪ್ರಿಯ 'ಗೃಹಲಕ್ಷ್ಮಿ' ಯೋಜನೆಯ ದುರುಪಯೋಗವನ್ನು ತಡೆಯಲು ಮತ್ತು ಅರ್ಹರನ್ನು ಮರುಪರಿಶೀಲಿಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಇನ್ನು ಮುಂದೆ ಸೇವಾ ಸಿಂಧು ಕೇಂದ್ರಗಳ ಮೂಲಕ ಹಾಗೂ ಸಿಬ್ಬಂದಿಗಳು ನೇರವಾಗಿ ಫಲಾನುಭವಿಗಳ ಮನೆ ಬಾಗಿಲಿಗೆ ತೆರಳಿ ಬಯೋಮೆಟ್ರಿಕ್ ಅಥವಾ ಫೇಸ್ ಅಥೆಂಟಿಕೇಶನ್ ಆಧರಿಸಿ ತಪಾಸಣೆ ನಡೆಸಲಿದ್ದಾರೆ. ಇದಕ್ಕಾಗಿ ಇ-ಡಿಸಿಎಸ್ ತಂತ್ರಜ್ಞಾನದಡಿ ವಿಶೇಷ ಮೊಬೈಲ್ ಆ್ಯಪ್ ಹಾಗೂ ವೆಬ್ ತಂತ್ರಾಂಶವನ್ನು ಸಿದ್ಧಪಡಿಸಲಾಗಿದ್ದು, ಸದ್ಯದಲ್ಲೇ ಈ ಜಂಟಿ ಸರ್ವೇ ಪ್ರಕ್ರಿಯೆ ಆರಂಭವಾಗಲಿದೆ.

ಪ್ರಸ್ತುತ ರಾಜ್ಯಾದ್ಯಂತ ಸುಮಾರು 1.24 ಕೋಟಿಗೂ ಹೆಚ್ಚು ಮಹಿಳೆಯರು ಈ ಯೋಜನೆಯ ಲಾಭ ಪಡೆಯುತ್ತಿದ್ದು, ಇದುವರೆಗೆ ಸರ್ಕಾರ ಒಟ್ಟು ₹ ಕೋಟಿ 6,951ರೂಪಾಯಿಗಳನ್ನು ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿಗಳ ಖಾತೆಗೆ ಜಮೆ ಮಾಡಿದೆ. ಒಟ್ಟು 32 ಕಂತುಗಳ ಹಣ ಈಗಾಗಲೇ ಯಶಸ್ವಿಯಾಗಿ ತಲುಪಿದೆ. ಆದರೆ, ಇತ್ತೀಚಿನ ತಪಾಸಣೆಯಲ್ಲಿ ಗಂಭೀರ ಲೋಪದೋಷಗಳು ಬೆಳಕಿಗೆ ಬಂದಿವೆ.

ಯೋಜನೆ ಆರಂಭವಾದಾಗಿನಿಂದ ಸುಮಾರು 3.13 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಮರಣ ಹೊಂದಿದ್ದರೂ, ತಾಂತ್ರಿಕ ಕಾರಣಗಳಿಂದಾಗಿ ಅದರಲ್ಲಿ 1.10 ಲಕ್ಷಕ್ಕೂ ಅಧಿಕ ಮೃತ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಸರಿಸುಮಾರು ₹117.31 ಕೋಟಿ ರೂಪಾಯಿ ಹಣ ಮರಣದ ನಂತರವೂ ಜಮೆಯಾಗಿದೆ.

ಈ ಅಕ್ರಮ ಮತ್ತು ತಪ್ಪು ಪಾವತಿಯನ್ನು ತಡೆಗಟ್ಟಲು ಸರ್ಕಾರ ಈಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಈಗಾಗಲೇ ತಪ್ಪು ಖಾತೆಗೆ ಹೋಗಿರುವ ಹಣದಲ್ಲಿ ₹40.07 ಕೋಟಿಯನ್ನು ಸರ್ಕಾರದ ಖಾತೆಗೆ ಮರುಪಡೆಯಲಾಗಿದ್ದು, ಬಾಕಿ ಮೊತ್ತದ ವಸೂಲಾತಿ ಪ್ರಕ್ರಿಯೆ ಚುರುಕಾಗಿದೆ.

ಇದರೊಂದಿಗೆ ಆದಾಯ ತೆರಿಗೆ ಪಾವತಿದಾರರು ಮತ್ತು ಮೃತರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗುತ್ತಿದೆ. ಒಂದು ವೇಳೆ ಮೂಲ ಫಲಾನುಭವಿ ಮೃತಪಟ್ಟಿದ್ದರೆ, ಆ ಕುಟುಂಬದ ಮತ್ತೊಬ್ಬ ಅರ್ಹ ಮಹಿಳಾ ಸದಸ್ಯರನ್ನು ಪರ್ಯಾಯ ಫಲಾನುಭವಿಯಾಗಿ ಸೇರಿಸಲು ಸರ್ಕಾರ ಮುಕ್ತ ಅವಕಾಶ ನೀಡಿದೆ.