Kannada News Next

karnataka

ಕರಾವಳಿಗೂ ತಟ್ಟಿದ ಬರಗಾಲದ ಬಿಸಿ : ಪುತ್ತೂರು, ಮೂಡುಬಿದಿರೆ, ಮೂಲ್ಕಿ ಸೇರಿ 9 ತಾಲೂಕುಗಳು ಬರ ಪಟ್ಟಿಗೆ

ರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರು ಮಳೆಯ ತೀವ್ರ ಕೊರತೆಯಿಂದಾಗಿ ಬರಗಾಲದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

By Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ
Karnataka drought list karavali puttur Mulki moodbidri

ರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರು ಮಳೆಯ ತೀವ್ರ ಕೊರತೆಯಿಂದಾಗಿ ಬರಗಾಲದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಹೊಸದಾಗಿ ಇನ್ನೂ ಒಂಬತ್ತು ತಾಲೂಕುಗಳನ್ನು ಅಧಿಕೃತವಾಗಿ ಬರಪೀಡಿತ ಪ್ರದೇಶಗಳೆಂದು ಘೋಷಿಸಿದೆ.

ಇದರೊಂದಿಗೆ ಕರ್ನಾಟಕದಲ್ಲಿ ಬರಗಾಲಕ್ಕೆ ತುತ್ತಾದ ಒಟ್ಟು ತಾಲೂಕುಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಬರೋಬ್ಬರಿ 226ಕ್ಕೆ ತಲುಪಿದೆ. ರಾಜ್ಯದ ಒಟ್ಟು 236 ತಾಲೂಕುಗಳ ಪೈಕಿ ಕೇವಲ ಹತ್ತು ತಾಲೂಕುಗಳನ್ನು ಹೊರತುಪಡಿಸಿ ಇಡೀ ಕರ್ನಾಟಕವೇ ಈಗ ಕಡು ಬರಗಾಲದ ಆತಂಕವನ್ನು ಎದುರಿಸುತ್ತಿದೆ.

ಈ ಬಾರಿ ಕರಾವಳಿ ಕರ್ನಾಟಕದ ಜಿಲ್ಲೆಗಳಿಗೂ ಬರಗಾಲದ ಬಿಸಿ ಜೋರಾಗಿ ತಟ್ಟಿದೆ. ನೂತನವಾಗಿ ಪ್ರಕಟಿಸಲಾದ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಮೂಡುಬಿದಿರೆ ಮತ್ತು ಮೂಲ್ಕಿ ತಾಲೂಕುಗಳು ಹಾಗೂ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ಮತ್ತು ದಾಂಡೇಲಿ ತಾಲೂಕುಗಳು ಮಧ್ಯಮ ಪ್ರಮಾಣದ ಬರಪೀಡಿತ ಪ್ರದೇಶಗಳಾಗಿ ಗುರುತಿಸಲ್ಪಟ್ಟಿವೆ.

ಕರಾವಳಿ ಭಾಗದಲ್ಲಿ ಸಾಮಾನ್ಯವಾಗಿ ಭಾರಿ ಮಳೆಯಾಗುತ್ತಿದ್ದರೂ, ಈ ವರ್ಷ ಉಂಟಾಗಿರುವ ತೀವ್ರ ಮಳೆ ಕೊರತೆಯು ಅಂತರ್ಜಲ ಕುಸಿತ ಹಾಗೂ ಕೃಷಿ ಚಟುವಟಿಕೆಗಳ ಮೇಲಿನ ಭೀತಿಯನ್ನು ಹೆಚ್ಚಿಸಿದೆ.

ಡಾ. ಜಿ. ಪರಮೇಶ್ವರ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ರಾಜ್ಯದಲ್ಲಿ ತಳಮಟ್ಟದ ವಸ್ತುಸ್ಥಿತಿಯನ್ನು ಅರಿಯಲು ನಡೆಸಲಾದ ಜಂಟಿ ಸಮೀಕ್ಷೆಯ ವರದಿ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ.

ಹೊಸ ಪಟ್ಟಿಯಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು ತೀವ್ರ ಬರಗಾಲದ ಹೊಡೆತಕ್ಕೆ ಸಿಲುಕಿದ್ದರೆ, ಬೆಳಗಾವಿಯ ಖಾನಾಪುರ ಹಾಗೂ ಶಿವಮೊಗ್ಗ ಜಿಲ್ಲೆಯ ಹೊಸನಗರ ಮತ್ತು ಸಾಗರ ತಾಲೂಕುಗಳು ಕೂಡ ಬರಪೀಡಿತವಾಗಿವೆ. ಉಳಿದ ತಾಲೂಕುಗಳಲ್ಲಿನ ಪರಿಸ್ಥಿತಿಯನ್ನು ಸರ್ಕಾರವು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ನಿಯಮಾವಳಿಗಳ ಪ್ರಕಾರ ಮುಂದಿನ ದಿನಗಳಲ್ಲಿ ಅಗತ್ಯಬಿದ್ದರೆ ಮತ್ತಷ್ಟು ತಾಲೂಕುಗಳನ್ನು ಈ ಪಟ್ಟಿಗೆ ಸೇರಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.