ಆಷಾಢ ಮಾಸ ಭಕ್ತಿ ಭಾವದ ಶ್ರಾವಣ ಮಾಸದ ಇನ್ನೇನು ಆರಂಭಗೊಳ್ಳಲಿದ್ದು, ಇಡೀ ರಾಜ್ಯಾದ್ಯಂತ ಸಾಲು ಸಾಲು ಹಬ್ಬಗಳ ಸರಣಿ ಶುರುವಾಗಿದೆ. ಆದರೆ, ಈ ಬಾರಿಯ ಹಬ್ಬದ ಸೀಸನ್‌ಗೆ ಮುಂಗಾರು ಮಳೆಯ ವೈಫಲ್ಯ ಹಾಗೂ ಮಾರುಕಟ್ಟೆಯಲ್ಲಿನ ಅಗತ್ಯ ವಸ್ತುಗಳ ಭಾರಿ ಬೆಲೆ ಏರಿಕೆಯು ಭಾರಿ ಹೊಡೆತ ನೀಡಿದೆ. ಹಬ್ಬಗಳ ಖುಷಿಯಲ್ಲಿ ಮುಳುಗಬೇಕಿದ್ದ ರಾಜ್ಯದ ಸಾರ್ವಜನಿಕರು ಮತ್ತು ಮಧ್ಯಮ ವರ್ಗದ ಗ್ರಾಹಕರು ದಿನಸಿ ಸಾಮಗ್ರಿಗಳ ದರಗಳನ್ನು ನೋಡಿ ಕಂಗಾಲಾಗಿದ್ದಾರೆ.
ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಹಬ್ಬದ ಅಡುಗೆಗೆ ಬೇಕಾಗುವ ಕಿರಾಣಿ ಸಾಮಗ್ರಿಗಳ ಬೆಲೆ ಗಗನ ಮುಖಿಯಾಗಿದೆ. ತೊಗರಿಬೇಳೆ ಮತ್ತು ಹೆಸರುಕಾಳು ಪ್ರತಿ ಕೆಜಿಗೆ 120 ರೂಪಾಯಿ ತಲುಪಿದ್ದರೆ, ಉದ್ದಿನಬೇಳೆ 140 ರಿಂದ 150 ರೂಪಾಯಿ ಹಾಗೂ ಶೇಂಗಾ 140 ರೂಪಾಯಿ ಆಸುಪಾಸಿನಲ್ಲಿದೆ. ಇನ್ನು ಸಕ್ಕರೆ 55 ರೂಪಾಯಿ ಹಾಗೂ ಬೆಲ್ಲ 52 ರೂಪಾಯಿಗೆ ಮಾರಾಟವಾಗುತ್ತಿದೆ.
ಹಬ್ಬದ ಸಿಹಿ ತಿನಿಸುಗಳಿಗೆ ಪ್ರಮುಖವಾಗಿ ಬೇಕಾಗುವ ಡ್ರೈಫ್ರೂಟ್ಸ್ ಬೆಲೆಯಂತೂ ಸಾಮಾನ್ಯ ಜನರ ಕೈಗೆಟುಕದಂತಾಗಿದೆ. ಬಾದಾಮಿ ಮತ್ತು ಗೋಡಂಬಿ ಬೆಲೆ 1,000 ರೂಪಾಯಿಯ ಗಡಿ ದಾಟಿದೆ. ಇನ್ನು ಒಣದ್ರಾಕ್ಷಿ 400 ರೂಪಾಯಿಗೆ ಏರಿಕೆಯಾಗಿದ್ದರೆ, ಏಲಕ್ಕಿ ದರ ಬರೋಬ್ಬರಿ 4,000 ರೂಪಾಯಿಗೆ ಜಿಗಿದು ಗ್ರಾಹಕರಿಗೆ ಶಾಕ್ ನೀಡಿದೆ. ಒಣ ಕೊಬ್ಬರಿ ಕೂಡ ಕೆಜಿಗೆ 400 ರೂಪಾಯಿಗೆ ತಲುಪಿದೆ.
ಒಂದೆಡೆ ಮಳೆ ಕೊರತೆಯಿಂದ ಕೃಷಿ ಆದಾಯವಿಲ್ಲದೆ ಗ್ರಾಮೀಣ ಭಾಗದ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೆ, ಮತ್ತೊಂದೆಡೆ ನಗರ ಪ್ರದೇಶದ ಗ್ರಾಹಕರಿಗೂ ಈ ಬೆಲೆ ಏರಿಕೆ ಜೇಬಿಗೆ ಕತ್ತರಿ ಹಾಕಿದೆ. ವರ್ಷದ ಸಂಪ್ರದಾಯವನ್ನು ಕೈಬಿಡಲು ಮನಸ್ಸಿಲ್ಲದ ರಾಜ್ಯದ ಜನತೆ, ಅನಿವಾರ್ಯವಾಗಿ ಅದ್ದೂರಿತನವನ್ನು ಬದಿಗೊತ್ತಿ, ತಮಗೆ ಬೇಕಾದಷ್ಟು ಮಾತ್ರ ಸಾಮಗ್ರಿಗಳನ್ನು ಖರೀದಿಸಿ ಅತ್ಯಂತ ಸರಳವಾಗಿ ಹಬ್ಬಗಳನ್ನು ಆಚರಿಸಲು ಮುಂದಾಗುತ್ತಿದ್ದಾರೆ.