ಹೋಟೆಲ್​, ಪಬ್​ ಹಾಗೂ ರೆಸ್ಟಾರೆಂಟ್​ ಮಾಲೀಕರಿಗೆ ಆಹಾರ ಇಲಾಖೆಯಿಂದ ಹೊಸ ರೂಲ್ಸ್​

ಸಾರ್ವಜನಿಕರ ಆರೋಗ್ಯದೊಂದಿಗೆ ಆಟವಾಡುತ್ತಿದ್ದ ಈ ಗಂಭೀರ ದೂಷಣೆಯನ್ನು ನಿಯಂತ್ರಿಸಲು ರಾಜ್ಯ ಆರೋಗ್ಯ ಇಲಾಖೆಯು ಇದೀಗ ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

By ರಶ್ಮಿ ಎಸ್. | Rashmi S

1 min read

WhatsAppPost
hotel pub restaurant food department new rules karnataka
hotel pub restaurant food department new rules karnataka

ಬೆಂಗಳೂರಿನ ಪ್ರತಿಷ್ಠಿತ ಸ್ಟಾರ್ ಹೋಟೆಲ್‌ಗಳು ಮತ್ತು ಪಬ್‌ಗಳ ಮೇಲೆ ಇತ್ತೀಚೆಗೆ ಅವಧಿ ಮೀರಿದ ಆಹಾರ ಪತ್ತೆ ಪ್ರಕರಣ ಗ್ರಾಹಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ, ಪ್ರಮುಖ ಹೋಟೆಲ್‌ಗಳ ಅಡುಗೆ ಕೋಣೆಗಳಲ್ಲಿ ಕೊಳೆತ ಮಾಂಸ, ಫಂಗಸ್ ಹಿಡಿದ ತರಕಾರಿಗಳು ಮತ್ತು ಅವಧಿ ಮುಗಿದ ನೂರಾರು ಕೆಜಿ ಆಹಾರ ಪದಾರ್ಥಗಳು ಪತ್ತೆಯಾಗಿವೆ. ಸಾರ್ವಜನಿಕರ ಆರೋಗ್ಯದೊಂದಿಗೆ ಆಟವಾಡುತ್ತಿದ್ದ ಈ ಗಂಭೀರ ದೂಷಣೆಯನ್ನು ನಿಯಂತ್ರಿಸಲು ರಾಜ್ಯ ಆರೋಗ್ಯ ಇಲಾಖೆಯು ಇದೀಗ ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಹೊಸ ನಿಯಮಾವಳಿಗಳ ಪ್ರಕಾರ, ಮಾಂಸಾಹಾರಿ ಪದಾರ್ಥಗಳನ್ನು ಕಡ್ಡಾಯವಾಗಿ 4°C ಗಿಂತ ಕಡಿಮೆ ತಾಪಮಾನದಲ್ಲಿಯೇ ಇಡಬೇಕು. ಸಿದ್ಧಪಡಿಸಿದ ಸಸ್ಯಹಾರಿ ಆಹಾರವನ್ನು 65°C ಮತ್ತು ಮಾಂಸಾಹಾರಿ ಆಹಾರವನ್ನು 70°C ತಾಪಮಾನದಲ್ಲಿ ಕಾಯ್ದಿರಿಸುವುದು ಕಡ್ಡಾಯವಾಗಿದೆ. ಇನ್ನು ಫ್ರೋಜನ್ ಆಹಾರಗಳಿಗೆ -18°C ಗರಿಷ್ಠ ಮಿತಿಯಾಗಿದೆ. ಒಮ್ಮೆ ಸಿದ್ಧಪಡಿಸಿದ ಆಹಾರವನ್ನು ಗ್ರಾಹಕರಿಗೆ ನೀಡುವ ಮುನ್ನ ಕನಿಷ್ಠ 75°C ನಲ್ಲಿ ಮರು-ಬಿಸಿ ಮಾಡಬೇಕೆಂದು ಇಲಾಖೆ ಸ್ಪಷ್ಟಪಡಿಸಿದೆ.

ಅಡುಗೆಗೆ ಬಳಸುವ ಎಣ್ಣೆಯ ಮರುಬಳಕೆಗೂ ಬ್ರೇಕ್ ಬಿದ್ದಿದ್ದು, ಟಿಪಿಸಿ (TPC) ಮಟ್ಟ ಶೇಕಡಾ 25ಕ್ಕಿಂತ ಹೆಚ್ಚಿರಬಾರದು. ಹಸಿ ಆಹಾರ ಮತ್ತು ಸಂಪೂರ್ಣ ಬೆಂದ ಆಹಾರಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಬೇಕು. ವೆಜ್ ಹಾಗೂ ನಾನ್-ವೆಜ್ ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆ ಇರಬೇಕು. ಅತಿ ಮುಖ್ಯವಾಗಿ, ಪ್ರತಿಯೊಂದು ಸಂಸ್ಥೆಯೂ ತನ್ನ ಆವರಣದಲ್ಲಿ ಎಫ್‌ಎಸ್‌ಎಸ್‌ಎಐ ಪರವಾನಗಿಯನ್ನು ಗ್ರಾಹಕರಿಗೆ ಕಾಣಿಸುವಂತೆ ಪ್ರದರ್ಶಿಸುವುದು ಕಡ್ಡಾಯವಾಗಿದೆ.

ಈ ನಿಯಮಗಳನ್ನು ಗಾಳಿಗೆ ತೂರಿ ಗ್ರಾಹಕರ ಜೀವದ ಜೊತೆ ಚೆಲ್ಲಾಟವಾಡುವ ಹೋಟೆಲ್, ಪಬ್ ಹಾಗೂ ರೆಸ್ಟೋರೆಂಟ್‌ಗಳ ವಿರುದ್ಧ ದಂಡ ಮಾತ್ರವಲ್ಲದೆ, ಲೈಸೆನ್ಸ್ ರದ್ದುಪಡಿಸಿ ಶಾಶ್ವತವಾಗಿ ಬೀಗ ಜಡಿಯಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ. ಆಹಾರ ಇಲಾಖೆಯ ಈ ಹೊಸ ರೂಲ್ಸ್​ ಬಳಿಕ ಹೋಟೆಲ್​, ಪಬ್​ ಹಾಗೂ ರೆಸ್ಟಾರೆಂಟ್​ ಮಾಲೀಕರಿಗೆ ನಡುಕ ಶುರುವಾಗಿದೆ.

Topics

ಸಂಬಂಧಿತ ಸುದ್ದಿಗಳು