Kannada News Next

karnataka

ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದ ಬಂಪರ್ ಗಿಫ್ಟ್ : ಸರ್ಕಾರಿ ನೌಕರಿಯಲ್ಲಿ ಶೇಕಡಾ 2ರಷ್ಟು ಮೀಸಲಾತಿ

ಪದಕ ವಿಜೇತರಿಗೆ ನೀಡಲಾಗುವ ನಗದು ಬಹುಮಾನದ ಮೊತ್ತವನ್ನು ಇತರೆ ಪ್ರಗತಿಪರ ರಾಜ್ಯಗಳಿಗೆ ಸರಿಸಮಾನವಾಗಿ ಹೆಚ್ಚಿಸುವ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

By ರಶ್ಮಿ ಎಸ್. | Rashmi S
karnataka government 2 percent reservation sports persons jobs

ರಾಜ್ಯದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಆರ್ಥಿಕ ಭದ್ರತೆ ಒದಗಿಸುವ ಮತ್ತು ಅವರ ಸಾಧನೆಯನ್ನು ಗೌರವಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಐತಿಹಾಸಿಕ ತೀರ್ಮಾನವೊಂದನ್ನು ಕೈಗೊಂಡಿದೆ.

ಕರ್ನಾಟಕ ನಾಗರಿಕ ಸೇವೆಗಳ ನಿಯಮಗಳಿಗೆ ಮಹತ್ವದ ತಿದ್ದುಪಡಿ ತರಲಾಗಿದ್ದು, ಕ್ರೀಡಾ ಸಾಧಕರಿಗೆ ಎಲ್ಲಾ ಸರ್ಕಾರಿ ಇಲಾಖೆಗಳ ನೇರ ನೇಮಕಾತಿಯಲ್ಲಿ ಶೇ. 2 ರಷ್ಟು ವಿಶೇಷ ಮೀಸಲಾತಿಯನ್ನು ಕಲ್ಪಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ. ಪೊಲೀಸ್ ಮತ್ತು ಅರಣ್ಯ ಇಲಾಖೆಗಳ ನೇಮಕಾತಿಗಳಲ್ಲಿ ಈ ಕ್ರೀಡಾ ಕೋಟಾದ ಪ್ರಮಾಣವನ್ನು ಶೇಕಡಾ 3 ರಷ್ಟು ನಿಗದಿಪಡಿಸಲಾಗಿದೆ.

ಈ ನೂತನ ಕ್ರೀಡಾ ಮೀಸಲಾತಿ ನಿಯಮವು ಸಾಮಾನ್ಯ ವರ್ಗ , ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಸೇರಿದಂತೆ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೂ ಸಮಾನವಾಗಿ ಅನ್ವಯವಾಗಲಿದೆ.

ಈ ಉದ್ಯೋಗ ಸೌಲಭ್ಯವನ್ನು ಪಡೆಯಲು ಅಭ್ಯರ್ಥಿಗಳು ಕನಿಷ್ಠ 10 ವರ್ಷಗಳ ಕಾಲ ಕರ್ನಾಟಕದಲ್ಲಿ ಕಡ್ಡಾಯವಾಗಿ ವಾಸವಿರಬೇಕು ಹಾಗೂ ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರಬೇಕು ಎಂಬ ಅರ್ಹತಾ ಮಾನದಂಡವನ್ನು ವಿಧಿಸಲಾಗಿದೆ.

ಸರ್ಕಾರವು ಒಟ್ಟು 34 ಪ್ರಮುಖ ಕ್ರೀಡೆಗಳನ್ನು ಈ ಮೀಸಲಾತಿ ವ್ಯಾಪ್ತಿಗೆ ತಂದಿದ್ದು, ಒಲಿಂಪಿಕ್ಸ್ ಮತ್ತು ಏಷ್ಯನ್ ಗೇಮ್ಸ್‌ನಂತಹ ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಉದ್ಯೋಗ ನೇಮಕಾತಿಯಲ್ಲಿ ವಿಶೇಷ ಕೃಪಾಂಕಗಳನ್ನು ನೀಡಲಾಗುತ್ತದೆ.

ಇದರೊಂದಿಗೆ, ಪದಕ ವಿಜೇತರಿಗೆ ನೀಡಲಾಗುವ ನಗದು ಬಹುಮಾನದ ಮೊತ್ತವನ್ನು ಇತರೆ ಪ್ರಗತಿಪರ ರಾಜ್ಯಗಳಿಗೆ ಸರಿಸಮಾನವಾಗಿ ಹೆಚ್ಚಿಸುವ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಕರ್ನಾಟಕ ಒಲಿಂಪಿಕ್ ಸಂಸ್ಥೆಯು 4 ನಾಲ್ಕು ವರ್ಷಗಳಿಂದ ನಡೆಸಿದ ನಿರಂತರ ಪ್ರಯತ್ನದ ಫಲವಾಗಿ ಈ ಮಹತ್ವದ ಆದೇಶ ಜಾರಿಗೆ ಬಂದಿದ್ದು, ಭವಿಷ್ಯದಲ್ಲಿ ಕ್ರೀಡೆಯನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳುವ ಯುವ ಪೀಳಿಗೆಗೆ ಇದು ದೊಡ್ಡ ಪ್ರೋತ್ಸಾಹ ನೀಡಿದಂತಾಗಿದೆ.