Kannada News Next

karnataka

ರಾಜ್ಯ ಸರ್ಕಾರದ ಖಜಾನೆಗೆ ಮದ್ಯಪ್ರಿಯರಿಂದ ಕಿಕ್​

ಅಬಕಾರಿ ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ, ಈ ಅರ್ಧವಾರ್ಷಿಕ ಅವಧಿಯಲ್ಲಿ ಒಟ್ಟು 22,191.63 ಕೋಟಿ ರೂಪಾಯಿಗಳಷ್ಟು ದಾಖಲೆಯ ರಾಜಸ್ವ ಸಂಗ್ರಹವಾಗಿದೆ.

By ರಶ್ಮಿ ಎಸ್. | Rashmi S
karnataka government excise revenue liquor sales surge

ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿಯ ಕುರಿತು ಹಲವು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ರಾಜ್ಯ ಅಬಕಾರಿ ಇಲಾಖೆಯು ಪ್ರಸಕ್ತ ಸಾಲಿನ ಮಹತ್ವದ ವರದಿಯೊಂದನ್ನು ಬಿಡುಗಡೆ ಮಾಡಿದೆ. 2026ನೇ ಹಣಕಾಸು ವರ್ಷದ ಮೊದಲ ಆರು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಮದ್ಯದ ಮಾರಾಟ ಗಣನೀಯವಾಗಿ ಹೆಚ್ಚಾಗಿದ್ದು, ಸರ್ಕಾರದ ಖಜಾನೆಗೆ ಬಂಪರ್ ಆದಾಯ ತಂದುಕೊಟ್ಟಿದೆ.

ಅಬಕಾರಿ ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ, ಈ ಅರ್ಧವಾರ್ಷಿಕ ಅವಧಿಯಲ್ಲಿ ಒಟ್ಟು 22,191.63 ಕೋಟಿ ರೂಪಾಯಿಗಳಷ್ಟು ದಾಖಲೆಯ ರಾಜಸ್ವ ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಕೆ ಮಾಡಿದರೆ, ಈ ಬಾರಿ ಸರ್ಕಾರದ ಆದಾಯದಲ್ಲಿ ಶೇಕಡಾ 13.39 ರಷ್ಟು ಗಮನಾರ್ಹ ಪ್ರಗತಿ ಕಂಡುಬಂದಿದೆ. ಅಂದರೆ ಕಳೆದ ಸಾಲಿಗಿಂತ ಸುಮಾರು 2,621.40 ಕೋಟಿ ರೂಪಾಯಿಗಳಷ್ಟು ಅಧಿಕ ಹಣ ಸರ್ಕಾರದ ಬೊಕ್ಕಸಕ್ಕೆ ಜಮೆಯಾಗಿದೆ.

ಈ ಬಾರಿಯ ಮದ್ಯ ಮಾರಾಟದ ಅಂಕಿ-ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಬಿಯರ್ ಮಾರಾಟವು ಅಭೂತಪೂರ್ವ ಬೆಳವಣಿಗೆಯನ್ನು ಸಾಧಿಸಿದೆ. ರಾಜ್ಯದಲ್ಲಿ ತಲೆದೋರಿರುವ ಬರದ ಪರಿಸ್ಥಿತಿಯ ನಡುವೆಯೂ ಮದ್ಯಪ್ರಿಯರು ಬಿಯರ್ ಖರೀದಿಗೆ ಮುಗಿಬಿದ್ದಿದ್ದಾರೆ.

ಕಳೆದ ಆರು ತಿಂಗಳಲ್ಲಿ ಬರೋಬ್ಬರಿ 275.96 ಲಕ್ಷ ಪೆಟ್ಟಿಗೆಗಳಷ್ಟು ಬಿಯರ್ ಖಾಲಿಯಾಗಿದ್ದು, ಇದು ಕಳೆದ ವರ್ಷಕ್ಕಿಂತ ಶೇಕಡಾ 41.32 ರಷ್ಟು ಭಾರಿ ಏರಿಕೆಯನ್ನು ತೋರ್ಪಡಿಸಿದೆ. ಕೇವಲ ಬಿಯರ್ ಮಾರಾಟದ ಮೇಲಿನ ತೆರಿಗೆ ಮತ್ತು ಸುಂಕದಿಂದಲೇ ಸರ್ಕಾರಕ್ಕೆ 3,377.88 ಕೋಟಿ ರೂಪಾಯಿಗಳ ದೊಡ್ಡ ಮೊತ್ತದ ಆದಾಯ ಸಂದಾಯವಾಗಿದೆ.

ಮತ್ತೊಂದೆಡೆ, ಭಾರತೀಯ ತಯಾರಿಕೆಯ ವಿದೇಶಿ ಮದ್ಯ ಮಾರಾಟದಲ್ಲೂ ಸ್ಥಿರವಾದ ಪ್ರಗತಿ ಮುಂದುವರಿದಿದೆ. ಈ ಆರು ತಿಂಗಳ ಅವಧಿಯಲ್ಲಿ ಒಟ್ಟು 346.83 ಲಕ್ಷ ಪೆಟ್ಟಿಗೆಗಳಷ್ಟು ಐಎಂಎಎಲ್ ಮದ್ಯ ಮಾರಾಟವಾಗಿದೆ. ಮೊದಲ ಮೂರು ತಿಂಗಳಲ್ಲಿ 175.14 ಲಕ್ಷ ಪೆಟ್ಟಿಗೆ ಹಾಗೂ ನಂತರದ ಮೂರು ತಿಂಗಳಲ್ಲಿ 171.69 ಲಕ್ಷ ಪೆಟ್ಟಿಗೆಗಳಷ್ಟು ವ್ಯವಹಾರ ನಡೆದಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಇದರ ಮಾರಾಟ ಪ್ರಮಾಣದಲ್ಲಿ ಶೇಕಡಾ 1.14 ರಷ್ಟು ಅಲ್ಪ ಚೇತರಿಕೆ ಕಂಡುಬಂದಿದ್ದರೂ, ಆದಾಯದ ದೃಷ್ಟಿಯಿಂದ ಇದು ಸಿಂಹಪಾಲು ಪಡೆದಿದೆ. ಕೇವಲ ಐಎಂಎಎಲ್ ಮದ್ಯದಿಂದಲೇ ಇಲಾಖೆಗೆ 17,424.57 ಕೋಟಿ ರೂಪಾಯಿ ರಾಜಸ್ವ ಲಭಿಸಿದ್ದು, ಕಳೆದ ವರ್ಷಕ್ಕಿಂತ 2,048.35 ಕೋಟಿ ರೂಪಾಯಿ ಹೆಚ್ಚಳ ದಾಖಲಿಸಿದೆ. ಒಟ್ಟಾರೆಯಾಗಿ, ಈ ಆರು ತಿಂಗಳ ಮದ್ಯದ ವಹಿವಾಟು ರಾಜ್ಯದ ಆರ್ಥಿಕತೆಗೆ ದೊಡ್ಡ ಮಟ್ಟದ ಬೂಸ್ಟ್ ನೀಡಿದೆ.