Kannada News Next

karnataka

Heavy Rain : ಕರ್ನಾಟಕಕ್ಕೆ ಮತ್ತೆ ಮುಂಗಾರು ಆರ್ಭಟ: ಬೆಂಗಳೂರು ಸೇರಿ 6 ಜಿಲ್ಲೆಗಳಿಗೆ ಭಾರಿ ಮಳೆ ಮುನ್ಸೂಚನೆ

ಹವಾಮಾನ ಇಲಾಖೆಯವರದಿಯ ಪ್ರಕಾರ, ಅಕ್ಟೋಬರ್ 9ರಂದು ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಒಟ್ಟು ಆರು ಪ್ರಮುಖ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ.

By ರಶ್ಮಿ ಎಸ್. | Rashmi S
Karnataka Heavy Rain Alert Bengaluru Six Districts

ಬೆಂಗಳೂರು : ರಾಜ್ಯದಲ್ಲಿ ಸದ್ಯ ನೈಋತ್ಯ ಮುಂಗಾರು ಮಾರುತಗಳ ಚಟುವಟಿಕೆ ತೀವ್ರವಾಗಿ ಕ್ಷೀಣಿಸಿದ್ದು, ಬಹುತೇಕ ಭಾಗಗಳಲ್ಲಿ ಬಿಸಿಲಿನ ವಾತಾವರಣ ಕಂಡುಬರುತ್ತಿದೆ. ಆದರೆ, ಹವಾಮಾನ ಇಲಾಖೆಯ ಇತ್ತೀಚಿನ ವರದಿಯ ಪ್ರಕಾರ, ನಾಳೆ ಅಂದರೆ ಅಕ್ಟೋಬರ್ 9ರಂದು ವಾತಾವರಣದಲ್ಲಿ ದಿಢೀರ್ ಏರುಪೇರಾಗಲಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಒಟ್ಟು ಆರು ಪ್ರಮುಖ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಹಠಾತ್ ಮಳೆ ಅಬ್ಬರಿಸಲಿದ್ದು, ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸುವಂತೆ ಇಲಾಖೆ ಸೂಚಿಸಿದೆ.

ಮತ್ತೊಂದೆಡೆ, ಕರಾವಳಿ ತೀರದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿಯೂ ನಾಳೆ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಒಣಹವೆ ಮುಂದುವರಿಯಲಿದೆ. ಇದೇ ವೇಳೆ ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ ಹಾಗೂ ಕಲಬುರಗಿ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಯಾವುದೇ ಮಳೆಯ ಲಕ್ಷಣಗಳಿಲ್ಲದೆ ಸಂಪೂರ್ಣವಾಗಿ ಶುಷ್ಕ ವಾತಾವರಣ ಇರಲಿದೆ.

ಹಾಸನ, ಕೊಡಗು ಮತ್ತು ಚಿಕ್ಕಮಗಳೂರಿನ ಮಲೆನಾಡು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಕಳೆದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ರಾಜ್ಯದಾದ್ಯಂತ ಯಾವುದೇ ದೊಡ್ಡ ಪ್ರಮಾಣದ ಮಳೆ ದಾಖಲಾಗಿಲ್ಲ. ಕೊಡಗಿನ ನಾಪೋಕ್ಲುವಿನಲ್ಲಿ ನಾಲ್ಕು ಸೆಂಟಿಮೀಟರ್ ಹಾಗೂ ಚಾಮರಾಜನಗರದ ಬೇಗೂರಿನಲ್ಲಿ ಮೂರು ಸೆಂಟಿಮೀಟರ್‌ನಷ್ಟು ಸಾಧಾರಣ ಮಳೆಯಾಗಿದೆ.

ಆದಾಗ್ಯೂ, ನಾಳೆಯ ಭಾರಿ ಮಳೆಯ ಮುನ್ಸೂಚನೆಯು ವಾಹನ ಸವಾರರು ಹಾಗೂ ತಗ್ಗು ಪ್ರದೇಶದ ನಿವಾಸಿಗಳಿಗೆ ಸಂಕಷ್ಟ ತರಬಹುದಾಗಿದ್ದು, ನಗರ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಆತಂಕ ಮೂಡಿಸಿದೆ.