Kannada News Next

karnataka

ರಾಜ್ಯಾದ್ಯಂತ ಮುಂದಿನ 48 ಗಂಟೆ ಬಿರುಗಾಳಿ ಸಹಿತ ಭಾರಿ ಮಳೆ..!

ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸದ್ಯ ಸಾಧಾರಣ ಮಳೆಯಾಗುತ್ತಿದ್ದು, ಮುಂದಿನ 24 ಗಂಟೆಗಳಲ್ಲಿ ಇದು ಭಾರಿ ಮಳೆಯಾಗಿ ಬದಲಾಗುವ ನಿರೀಕ್ಷೆಯಿದೆ.

By ರಶ್ಮಿ ಎಸ್. | Rashmi S
karnataka heavy rain storm alert 48 hours

ಮುಂಗಾರು ಮಾರುತಗಳು ಪ್ರಬಲಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಂದಿನ ಎರಡು ದಿನಗಳ ಕಾಲ ವಿವಿಧ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದ್ದು, ಗಂಟೆಗೆ ಕನಿಷ್ಠ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ. ದಕ್ಷಿಣ ಒಳನಾಡಿನ ಭಾಗದಲ್ಲಿ ಮಳೆಯ ತೀವ್ರತೆ ಹೆಚ್ಚಿರಲಿದ್ದು, ಬಳ್ಳಾರಿ, ತುಮಕೂರು, ವಿಜಯನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಎಚ್ಚರಿಕೆ ನೀಡಿದೆ. ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಂಭವವಿದೆ.

ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸದ್ಯ ಸಾಧಾರಣ ಮಳೆಯಾಗುತ್ತಿದ್ದು, ಮುಂದಿನ 24 ಗಂಟೆಗಳಲ್ಲಿ ಇದು ಭಾರಿ ಮಳೆಯಾಗಿ ಬದಲಾಗುವ ನಿರೀಕ್ಷೆಯಿದೆ. ಕರಾವಳಿ ತೀರದ ಈ ಜಿಲ್ಲೆಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮತ್ತೊಂದೆಡೆ ಉತ್ತರ ಒಳನಾಡಿನ ಬೆಳಗಾವಿ, ಕಲಬುರಗಿ, ಬಾಗಲಕೋಟೆ, ವಿಜಯಪುರ ಮತ್ತು ಬೀದರ್ ಜಿಲ್ಲೆಗಳಲ್ಲಿಯೂ ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಜೋರು ಮಳೆಯಾಗಲಿದೆ ಎಂದು ವರದಿ ತಿಳಿಸಿದೆ.

ಕಳೆದ ಒಂದು ದಿನದ ಅವಧಿಯಲ್ಲಿ ರಾಜ್ಯದ ಒಳನಾಡಿನಲ್ಲಿ ಮುಂಗಾರು ಮಳೆ ಸಾಮಾನ್ಯವಾಗಿದ್ದು, ಕಲಬುರಗಿ ಜಿಲ್ಲೆಯ ಯಡ್ರಾಮಿ ಭಾಗದಲ್ಲಿ ಗರಿಷ್ಠ ಎಂಟು ಸೆಂಮೀ ಮಳೆ ದಾಖಲಾಗಿದೆ. ರಾಜಧಾನಿಯ ಹೆಸರಘಟ್ಟ ಹಾಗೂ ವಿಜಯಪುರದ ಇಂಡಿ ತಾಲೂಕಿನಲ್ಲಿ ತಲಾ ಆರು ಸೆಂಮೀ ಮಳೆಯಾಗಿದೆ. ಹವಾಮಾನದ ಏರುಪೇರಿನಿಂದಾಗಿ ಸಾರ್ವಜನಿಕರು ಹಾಗೂ ವಿಶೇಷವಾಗಿ ರೈತರು ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸುವಂತೆ ಮತ್ತು ತಗ್ಗು ಪ್ರದೇಶಗಳಲ್ಲಿ ಜಾಗರೂಕರಾಗಿರುವಂತೆ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರವು ಸೂಚನೆ ನೀಡಿದೆ.