ಶಾಲಾ ಪಠ್ಯಕ್ರಮಕ್ಕೆ ಡಿಜಿಟಲ್​ ಸ್ಪರ್ಶ ನೀಡಿದ ರಾಜ್ಯ ಸರ್ಕಾರ

ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ಕರ್ನಾಟಕದಲ್ಲಿ ದೀಕ್ಷಾ ಡಿಜಿಟಲ್ ವೇದಿಕೆಯನ್ನು ಬಳಸುವ ಶಿಕ್ಷಕರ ಸಂಖ್ಯೆ ತೀರಾ ಕಡಿಮೆ ಇರುವುದು ಇಲಾಖೆಯ ಇತ್ತೀಚಿನ ಅಧ್ಯಯನದಲ್ಲಿ ತಿಳಿದುಬಂದಿದೆ.

By ರಶ್ಮಿ ಎಸ್. | Rashmi S

1 min read

WhatsAppPost
state govt digital touch to school syllabus
state govt digital touch to school syllabus

ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಆಧಾರಿತ ಕಲಿಕೆಯನ್ನು ಉತ್ತೇಜಿಸಲು ಮತ್ತು ಬೋಧನಾ ಪ್ರಕ್ರಿಯೆಯನ್ನು ಮತ್ತಷ್ಟು ಬಲಪಡಿಸಲು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು ಮಹತ್ವದ ತೀರ್ಮಾನ ಕೈಗೊಂಡಿದೆ. ಯು-ಡೈಸ್ ಪ್ಲಸ್ ವ್ಯವಸ್ಥೆಯಲ್ಲಿ ನೋಂದಾಯಿತರಾಗಿರುವ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಶಿಕ್ಷಕರು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 'ದೀಕ್ಷಾ' ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಇಲಾಖೆಯು ಹೊಸ ಸುತ್ತೋಲೆ ಹೊರಡಿಸಿದೆ.

ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ಕರ್ನಾಟಕದಲ್ಲಿ ದೀಕ್ಷಾ ಡಿಜಿಟಲ್ ವೇದಿಕೆಯನ್ನು ಬಳಸುವ ಶಿಕ್ಷಕರ ಸಂಖ್ಯೆ ತೀರಾ ಕಡಿಮೆ ಇರುವುದು ಇಲಾಖೆಯ ಇತ್ತೀಚಿನ ಅಧ್ಯಯನದಲ್ಲಿ ತಿಳಿದುಬಂದಿದೆ. ಅಲ್ಲದೆ, ಈ ತಂತ್ರಜ್ಞಾನದ ಬಳಕೆಯ ಕುರಿತು ಶಿಕ್ಷಕರಲ್ಲಿ ಸೂಕ್ತ ತರಬೇತಿಯ ಕೊರತೆಯು ಇರುವುದು ಈ ಕಟ್ಟುನಿಟ್ಟಿನ ಕ್ರಮಕ್ಕೆ ಪ್ರಮುಖ ಕಾರಣವಾಗಿದೆ. ಈ ಕೊರತೆಯನ್ನು ನೀಗಿಸಲು ಮತ್ತು ಪ್ರತಿಯೊಬ್ಬ ಶಿಕ್ಷಕರೂ ಡಿಜಿಟಲ್ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುವಂತೆ ಮಾಡಲು ಇಲಾಖೆಯು ವ್ಯವಸ್ಥಿತ ಯೋಜನೆಯೊಂದನ್ನು ರೂಪಿಸಿದೆ.

ನೂತನ ಆದೇಶದ ಪ್ರಕಾರ, ಶಾಲಾ ಮಟ್ಟದಲ್ಲಿ ತಾಂತ್ರಿಕ ಜ್ಞಾನವಿರುವ ಒಬ್ಬ ಶಿಕ್ಷಕರನ್ನು 'ನೋಡಲ್ ಅಧಿಕಾರಿ'ಯನ್ನಾಗಿ ನೇಮಕ ಮಾಡಬೇಕಾಗುತ್ತದೆ. ಈ ನೋಡಲ್ ಶಿಕ್ಷಕರು ಶಾಲೆಯ ಉಳಿದ ಸಿಬ್ಬಂದಿ ಪೋರ್ಟಲ್‌ನಲ್ಲಿ ಸುಲಭವಾಗಿ ನೋಂದಾಯಿಸಿಕೊಳ್ಳಲು ನೆರವಾಗಲಿದ್ದಾರೆ. ಇದರೊಂದಿಗೆ, ಶಿಕ್ಷಕರು ದೀಕ್ಷಾ ವೇದಿಕೆಯನ್ನು ದಿನನಿತ್ಯದ ಬೋಧನೆಗೆ ಹೇಗೆ ಬಳಸುತ್ತಿದ್ದಾರೆ ಮತ್ತು ಯಾವ ರೀತಿಯ ಇ-ಸಂಪನ್ಮೂಲಗಳನ್ನು ವೀಕ್ಷಿಸುತ್ತಿದ್ದಾರೆ ಎಂಬುದನ್ನು ದಾಖಲಿಸಲು ಶಾಲೆಗಳಲ್ಲಿ ಪ್ರತ್ಯೇಕ 'ಲಾಗ್ ಬುಕ್' ನಿರ್ವಹಣೆಯನ್ನು ಕಡ್ಡಾಯಗೊಳಿಸಲಾಗಿದೆ.

ಪಠ್ಯಪುಸ್ತಕಗಳಲ್ಲಿ ನೀಡಿರುವ ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡಿ, ಅದರಲ್ಲಿರುವ ಆಡಿಯೋ-ವಿಡಿಯೋ ಮುಂತಾದ ಪೂರಕ ಕಲಿಕಾ ಸಾಮಗ್ರಿಗಳನ್ನು ತರಗತಿಗಳಲ್ಲಿ ಬಳಸಲು ಶಿಕ್ಷಕರಿಗೆ ನಿರ್ದೇಶನ ನೀಡಲಾಗಿದೆ. ಜೊತೆಗೆ, ಕೃತಕ ಬುದ್ಧಿಮತ್ತೆ ಆಧಾರಿತ 'ಆಸ್ಕ್ ದೀಕ್ಷಾ ಎಐ' ಸೌಲಭ್ಯವನ್ನು ಬಳಸಿಕೊಂಡು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಮ್ಮ ಶೈಕ್ಷಣಿಕ ಸಂಶಯಗಳಿಗೆ ತ್ವರಿತ ಪರಿಹಾರ ಕಂಡುಕೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ. ಈ ಇಡೀ ಪ್ರಕ್ರಿಯೆಯ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಜಿಲ್ಲಾ ನೋಡಲ್ ಅಧಿಕಾರಿಗಳು ಪ್ರತಿ ತಿಂಗಳ 30ನೇ ತಾರೀಖಿನೊಳಗೆ ಇಲಾಖೆಗೆ ಕ್ರೋಢೀಕೃತ ವರದಿ ಸಲ್ಲಿಸಬೇಕಿದೆ. ಈ ವ್ಯವಸ್ಥೆಯನ್ನು ಹೆಚ್ಚು ಜನಪ್ರಿಯಗೊಳಿಸಲು ಇಲಾಖೆಯು ಶೀಘ್ರದಲ್ಲೇ ಯೂಟ್ಯೂಬ್ ಲೈವ್ ಮೂಲಕ ರಾಜ್ಯ ಮಟ್ಟದ ತರಬೇತಿ ಕಾರ್ಯಕ್ರಮವನ್ನೂ ಆಯೋಜಿಸಲಿದೆ.

Topics

ಸಂಬಂಧಿತ ಸುದ್ದಿಗಳು