ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳ ಮದುವೆ ವೆಚ್ಚದ ಹೊರೆಯನ್ನು ತಗ್ಗಿಸಲು ಮಹತ್ವದ ಯೋಜನೆಯೊಂದನ್ನು ಜಾರಿಗೆ ತಂದಿದೆ. 2026-27ನೇ ಹಣಕಾಸು ಸಾಲಿನಲ್ಲಿ ಸರಳ ಹಾಗೂ ಸಾಮೂಹಿಕ ವಿವಾಹಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ, ಈ ಯೋಜನೆಯಡಿ ದಾಂಪತ್ಯ ಜೀವನಕ್ಕೆ ಕಾಲಿಡುವ ಪ್ರತಿ ಅರ್ಹ ಜೋಡಿಗೆ ₹50,000 ಆರ್ಥಿಕ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ. ನೋಂದಾಯಿತ ಸ್ವಯಂ ಸೇವಾ ಸಂಸ್ಥೆಗಳು ಆಯೋಜಿಸುವ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಮದುವೆಯಾಗುವ ದಂಪತಿಗಳಿಗೆ ಮಾತ್ರ ಈ ವಿಶೇಷ ಸೌಲಭ್ಯ ಲಭ್ಯವಿರಲಿದೆ.
ಈ ಯೋಜನೆಯ ಪ್ರಯೋಜನ ಪಡೆಯಲು ಸರ್ಕಾರ ಕೆಲವು ಕಡ್ಡಾಯ ಷರತ್ತುಗಳನ್ನು ವಿಧಿಸಿದೆ. ವಿವಾಹವಾಗುವ ವಧು ಮತ್ತು ವರ ಇಬ್ಬರೂ ಕಡ್ಡಾಯವಾಗಿ ರಾಜ್ಯದ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಅಥವಾ ಪಾರ್ಸಿ ಧರ್ಮಕ್ಕೆ ಸೇರಿದವರಾಗಿರಬೇಕು. ವಯೋಮಿತಿಗೆ ಸಂಬಂಧಿಸಿದಂತೆ ವಧುವಿಗೆ ಕನಿಷ್ಠ 18 ರಿಂದ ಗರಿಷ್ಠ 42 ವರ್ಷ ಹಾಗೂ ವರನಿಗೆ ಕನಿಷ್ಠ 21 ರಿಂದ ಗರಿಷ್ಠ 45 ವರ್ಷ ವಯಸ್ಸಾಗಿರಬೇಕು. ಆರ್ಥಿಕ ಮಾನದಂಡಗಳ ಪ್ರಕಾರ ವಧು ಅಥವಾ ವರನ ವೈಯಕ್ತಿಕ ವಾರ್ಷಿಕ ಆದಾಯ ₹2.50 ಲಕ್ಷ ಹಾಗೂ ಇಬ್ಬರ ಒಟ್ಟು ಜಂಟಿ ಆದಾಯ ₹5 ಲಕ್ಷದ ಮಿತಿಯ ಒಳಗಿರಬೇಕು.
ಒಂದು ವರ್ಷದಲ್ಲಿ ಕನಿಷ್ಠ 10 ಜೋಡಿಗಳನ್ನು ಒಳಗೊಂಡು ನಡೆಸಲಾಗುವ ಸಾಮೂಹಿಕ ವಿವಾಹಗಳಿಗೆ ಮಾತ್ರ ಈ ಧನಸಹಾಯ ಅನ್ವಯಿಸುತ್ತದೆ. ಪ್ರಮುಖವಾಗಿ ಈ ಸೌಲಭ್ಯವು ಫಲಾನುಭವಿಗಳಿಗೆ ಜೀವನದಲ್ಲಿ ಒಮ್ಮೆ ಮಾತ್ರ ಲಭ್ಯವಿರಲಿದ್ದು, ಮರುಮದುವೆಗೆ ಇದು ಅನ್ವಯಿಸುವುದಿಲ್ಲ. ಅರ್ಹ ಸಂಸ್ಥೆಗಳು ಅಧಿಕೃತ ಆನ್ಲೈನ್ ಪೋರ್ಟಲ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಬಡ ಕುಟುಂಬಗಳ ಮದುವೆಗೆ ಆಸರೆಯಾಗುವ ಈ ಯೋಜನೆಯು ದುಬಾರಿ ಮದುವೆ ವೆಚ್ಚದ ಸಂಸ್ಕೃತಿಗೆ ಬ್ರೇಕ್ ಹಾಕಿ, ಸರಳ ವಿವಾಹಗಳನ್ನು ಉತ್ತೇಜಿಸಲು ಸಹಕಾರಿಯಾಗಲಿದೆ.