ಪಡಿತರದಾರರಿಗೆ ಬಂಪರ್​ ಗುಡ್​ನ್ಯೂಸ್​: ಇಂದಿನಿಂದಲೇ ರಾಜ್ಯಾದ್ಯಂತ ಅನ್ನಸೇವೆ ಆ್ಯಪ್​ ಲಭ್ಯ

ಈ ಡಿಜಿಟಲ್ ವ್ಯವಸ್ಥೆಯ ಮೂಲಕ ಫಲಾನುಭವಿಗಳು ತಾವಿದ್ದಲ್ಲಿಂದಲೇ ತಮ್ಮ ಸ್ಮಾರ್ಟ್‌ಫೋನ್ ಬಳಸಿ ಕೆಲವೇ ನಿಮಿಷಗಳಲ್ಲಿ ಇ-ಕೆವೈಸಿ ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ.

By ರಶ್ಮಿ ಎಸ್. | Rashmi S

1 min read

WhatsAppPost
anna seve app download ration card face authentication karnataka
anna seve app download ration card face authentication karnataka

ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಪಡಿತರ ಚೀಟಿದಾರರಿಗೆ ಅತ್ಯಂತ ಸುಲಭವಾಗಿ ಸೇವೆ ಒದಗಿಸುವ ಉದ್ದೇಶದಿಂದ ನೂತನ 'ಅನ್ನಸೇವೆ' ಮೊಬೈಲ್ ಆಪ್ಲಿಕೇಶನ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಸಾರ್ವಜನಿಕರು ತಮ್ಮ ಪಡಿತರ ಚೀಟಿಯ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇನ್ಮುಂದೆ ನ್ಯಾಯಬೆಲೆ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಕಾಯುವ ಅಗತ್ಯವಿಲ್ಲ.

ಈ ಡಿಜಿಟಲ್ ವ್ಯವಸ್ಥೆಯ ಮೂಲಕ ಫಲಾನುಭವಿಗಳು ತಾವಿದ್ದಲ್ಲಿಂದಲೇ ತಮ್ಮ ಸ್ಮಾರ್ಟ್‌ಫೋನ್ ಬಳಸಿ ಕೆಲವೇ ನಿಮಿಷಗಳಲ್ಲಿ ಇ-ಕೆವೈಸಿ ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ. ಆಹಾರ ಸಚಿವ ರಿಜ್ವಾನ್ ಅರ್ಷದ್ ಅವರು ಈ ತಂತ್ರಜ್ಞಾನವನ್ನು ಲೋಕಾರ್ಪಣೆಗೊಳಿಸಿದ್ದು, ಪ್ರಾಯೋಗಿಕ ಹಂತದ ಯಶಸ್ಸಿನ ಬಳಿಕ ಈಗ ರಾಜ್ಯಾದ್ಯಂತ ಜಾರಿಗೆ ತರಲಾಗಿದೆ.

ಸಾರ್ವಜನಿಕರು ಗೂಗಲ್ ಪ್ಲೇ ಸ್ಟೋರ್‌ನಿಂದ ಈ ಸುರಕ್ಷಿತ ಆಪ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದರಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ ಮುಖ ಗುರುತಿಸುವಿಕೆ ತಂತ್ರಜ್ಞಾನದ ನೆರವಿನಿಂದ ಇ-ಕೆವೈಸಿ ಪ್ರಕ್ರಿಯೆಯನ್ನು ಅತ್ಯಂತ ಸರಳವಾಗಿ ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ.

ವಿಶೇಷವಾಗಿ ಉದ್ಯೋಗ ಹಾಗೂ ಕೂಲಿ ಕೆಲಸಕ್ಕಾಗಿ ತಮ್ಮ ಸ್ವಗ್ರಾಮಗಳನ್ನು ಬಿಟ್ಟು ಬೇರೆ ಊರುಗಳಲ್ಲಿ ವಾಸಿಸುತ್ತಿರುವ ವಲಸೆ ಕಾರ್ಮಿಕರಿಗೆ ಮತ್ತು ದಿನಗೂಲಿ ನೌಕರರಿಗೆ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡದೆ ಇ-ಕೆವೈಸಿ ಮಾಡಿಕೊಳ್ಳಲು ಈ ವ್ಯವಸ್ಥೆ ಹೆಚ್ಚು ಸಹಕಾರಿಯಾಗಲಿದೆ.

ಈಗಾಗಲೇ ಒಂದು ವರ್ಷದ ಹಿಂದೆ ಇ-ಕೆವೈಸಿ ಪ್ರಕ್ರಿಯೆಯನ್ನು ಮುಗಿಸಿರುವ ಗ್ರಾಹಕರು ಸಹ ನಿಯಮಾವಳಿಗಳ ಪ್ರಕಾರ ಮತ್ತೊಮ್ಮೆ ಈ ಆಪ್ ಮೂಲಕ ತಮ್ಮ ವಿವರಗಳನ್ನು ನವೀಕರಿಸಿಕೊಳ್ಳುವುದು ಕಡ್ಡಾಯವಾಗಿದೆ. ಮುಂದಿನ ದಿನಗಳಲ್ಲಿ ಪಡಿತರ ಹಾಗೂ ಅನ್ನಭಾಗ್ಯ ಯೋಜನೆಯ ಧಾನ್ಯಗಳ ವಿತರಣೆಯಲ್ಲಿ ಯಾವುದೇ ರೀತಿಯ ತಾಂತ್ರಿಕ ಅಡಚಣೆ ಅಥವಾ ವ್ಯತ್ಯಯ ಉಂಟಾಗದಂತೆ ತಡೆಯಲು ಇಲಾಖೆ ಈ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.

ಹೀಗಾಗಿ ರಾಜ್ಯದ ಎಲ್ಲಾ ಬಾಕಿ ಉಳಿದಿರುವ ಪಡಿತರದಾರರು ಅಕ್ಟೋಬರ್ 20ರ ಅಂತಿಮ ಗಡುವಿನೊಳಗೆ ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಆಹಾರ ಇಲಾಖೆ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

Topics

ಸಂಬಂಧಿತ ಸುದ್ದಿಗಳು