Kannada News Next

karnataka

ಕರ್ನಾಟಕ ಪೊಲೀಸ್​ ಇಲಾಖೆಗೆ ಮಾಡರ್ನ್​ ಲುಕ್​ : ಖಾಕಿ ಪಡೆಗೆ ಶೀಘ್ರದಲ್ಲೇ ನೂತನ ವಿಸಿಲ್​ ಗಾರ್ಡ್ ಭಾಗ್ಯ

ಬ್ರಿಟಿಷ್ ಆಳ್ವಿಕೆಯ ಕಾಲದಿಂದಲೂ ಬಳಕೆಯಲ್ಲಿದ್ದ ಸಾಂಪ್ರದಾಯಿಕ ಲೋಹದ ವಿಸಿಲ್ ಚೈನ್‌ಗಳು ಮತ್ತು ಮೆಟಲ್ ಗುಂಡಿಗಳನ್ನು ಇನ್ನು ಮುಂದೆ ಸಂಪೂರ್ಣವಾಗಿ ಕೈಬಿಡಲು ತೀರ್ಮಾನಿಸಲಾಗಿದೆ.

By ರಶ್ಮಿ ಎಸ್. | Rashmi S
Karnataka police modern look new uniform whistle guard

ಬೆಂಗಳೂರು : ರಾಜ್ಯ ಸರ್ಕಾರವು ರಾಜ್ಯ ಪೊಲೀಸ್ ಇಲಾಖೆಯ ಕೆಳ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಹಿತದೃಷ್ಟಿಯಿಂದ ಅವರ ದಿನನಿತ್ಯದ ಸಮವಸ್ತ್ರದಲ್ಲಿ ಅತ್ಯಂತ ಮಹತ್ವದ ಸುಧಾರಣೆಯನ್ನು ತರಲು ನಿರ್ಧರಿಸಿದೆ.

ಬ್ರಿಟಿಷ್ ಆಳ್ವಿಕೆಯ ಕಾಲದಿಂದಲೂ ಬಳಕೆಯಲ್ಲಿದ್ದ ಸಾಂಪ್ರದಾಯಿಕ ಲೋಹದ ವಿಸಿಲ್ ಚೈನ್‌ಗಳು ಮತ್ತು ಮೆಟಲ್ ಗುಂಡಿಗಳನ್ನು ಇನ್ನು ಮುಂದೆ ಸಂಪೂರ್ಣವಾಗಿ ಕೈಬಿಡಲು ತೀರ್ಮಾನಿಸಲಾಗಿದೆ.

ಅವುಗಳ ಬದಲಾಗಿ ಆಧುನಿಕ ಶೈಲಿಯ ನೂತನ ವಿಸಿಲ್ ಗಾರ್ಡ್‌ಗಳು ಮತ್ತು ಹೊಳಪಿನ ಮ್ಯಾಟ್ ಫಿನಿಶ್ ಬಟನ್‌ಗಳನ್ನು ಸದ್ಯದಲ್ಲೇ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಅಧಿಕೃತವಾಗಿ ಘೋಷಿಸಿದ್ದಾರೆ. ಪೊಲೀಸ್ ಹುತಾತ್ಮರ ದಿನಾಚರಣೆಯ ವಿಶೇಷ ಸಮಾರಂಭದಲ್ಲಿ ಪಾಲ್ಗೊಂಡು ಅವರು ಈ ಪ್ರಕಟಣೆ ಹೊರಡಿಸಿದ್ದಾರೆ.

ಈ ಐತಿಹಾಸಿಕ ಬದಲಾವಣೆಯ ಹಿಂದೆ ಸಿಬ್ಬಂದಿಗಳ ಆರೋಗ್ಯ ಮತ್ತು ಕರ್ತವ್ಯದ ಅನುಕೂಲತೆಯ ಪ್ರಮುಖ ಉದ್ದೇಶ ಅಡಗಿದೆ. ಪ್ರಸ್ತುತ ಪೊಲೀಸರು ಧರಿಸುತ್ತಿರುವ ಲೋಹದ ಸರಪಳಿಗಳು ಮತ್ತು ಗುಂಡಿಗಳು ವಿಪರೀತ ಹವಾಮಾನದ ಕಾರಣದಿಂದಾಗಿ ಸುಲಭವಾಗಿ ತುಕ್ಕು ಹಿಡಿಯುತ್ತಿದ್ದವು.

ಇದರಿಂದ ಅವರ ಅಧಿಕೃತ ಸಮವಸ್ತ್ರಗಳು ಬೇಗನೆ ಹಾಳಾಗುತ್ತಿದ್ದವು. ಇಷ್ಟೇ ಅಲ್ಲದೇ ನಿತ್ಯವೂ ತುಕ್ಕು ಹಿಡಿದಿರುವ ಲೋಹದ ಸಂಪರ್ಕದಿಂದ ಸಿಬ್ಬಂದಿಗಳಿಗೆ ಚರ್ಮ ಸಂಬಂಧಿ ಅಲರ್ಜಿ ಸೇರಿದಂತೆ, ಹಲವು ಆರೋಗ್ಯ ಸಂಬಂಧಿತ ಸಮಸ್ಯೆಗಳು ಎದುರಾಗುತ್ತಿವೆ.. ಇದನ್ನು ಗಂಭೀರ ಸಮಸ್ಯೆಯನ್ನು ಪರಿಗಣಿಸಿರುವ ಕರ್ನಾಟಕ ಸರಕಾರ ಇದೀಗ ಮಹತ್ವದ ನಿರ್ಧಾರಕ್ಕೆ ಬಂದಿದೆ.

ಈಗಾಗಲೇ ದೇಶದ ಪ್ರಮುಖ ರಾಜ್ಯಗಳಾದ ದೆಹಲಿ, ಪಂಜಾಬ್, ಕೇರಳ, ಸಿಕ್ಕಿಂ, ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿ ಖಾಕಿ ಅಥವಾ ನೀಲಿ ಬಣ್ಣದ ವಿಸಿಲ್ ಗಾರ್ಡ್ ಧರಿಸುವ ಅತ್ಯಾಧುನಿಕ ಪದ್ಧತಿ ಚಾಲ್ತಿಯಲ್ಲಿದೆ. ಅದೇ ಮಾದರಿಯನ್ನು ಈಗ ನಮ್ಮ ರಾಜ್ಯಕ್ಕೂ ವಿಸ್ತರಿಸಲಾಗುತ್ತಿದೆ.

ಈ ಹಿಂದೆ ಬೇಸಿಗೆಯ ಬಿಸಿಲಿನಲ್ಲಿ ತೊಂದರೆ ನೀಡುತ್ತಿದ್ದ ಹಳೆಯ ಸ್ಲೋಚ್ ಕ್ಯಾಪ್‌ಗಳನ್ನು ತೆಗೆದುಹಾಕಿ, ನೇವಿ ಬ್ಲೂ ಬಣ್ಣದ ಪೀಕ್ ಕ್ಯಾಪ್‌ಗಳನ್ನು ಜಾರಿಗೆ ತರಲಾಗಿತ್ತು. ಆ ಯಶಸ್ವಿ ಸುಧಾರಣೆಯ ಮುಂದುವರಿದ ಭಾಗವಾಗಿ ಈಗ ಈ ಹೊಸ ತೀರ್ಮಾನ ಕೈಗೊಳ್ಳಲಾಗಿದೆ.

ಈಗಾಗಲೇ ರಾಜ್ಯದ ಅರಣ್ಯ ಮತ್ತು ಸಾರಿಗೆ ಇಲಾಖೆಯ ಸಿಬ್ಬಂದಿಗೆ ಇಂತಹ ಆಧುನಿಕ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಅತ್ಯಂತ ಸೀಮಿತ ಅವಧಿಯಲ್ಲಿ ಇಡೀ ಪೊಲೀಸ್ ಇಲಾಖೆಗೂ ಈ ಹೊಸ ನಿಯಮ ಅನ್ವಯವಾಗಲಿದೆ.