ತೀರ್ಥಹಳ್ಳಿಯಲ್ಲಿ ಗುಡ್ಡ ಕುಸಿತ.. ಒಂದೇ ಕುಟುಂಬದ ಮೂವರು ಸಾವು

ತೀರ್ಥಹಳ್ಳಿಯ ಇಂದಿರಾ ನಗರದಲ್ಲಿ ತಡರಾತ್ರಿ ಗುಡ್ಡ ಕುಸಿದು ಬಿದ್ದ ಪರಿಣಾಮ ಶೆಡ್‌ನಲ್ಲಿದ್ದ ಮಗು ಸೇರಿದಂತೆ ಒಂದೇ ಕುಟುಂಬದ ಮೂವರು ಮಣ್ಣಿನಡಿಯಲ್ಲಿ ಸಿಲುಕಿ ದುರ್ಮರಣ ಹೊಂದಿದ್ದಾರೆ.

By Meghana Pranuth | ಮೇಘನಾ ಪ್ರಣೂತ್‌

1 min read

WhatsAppPost
shivamogga rain
shivamogga rain

ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಮುಂದುವರಿದ ಮಳೆಯ ಆರ್ಭಟಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ತೀರ್ಥಹಳ್ಳಿಯ ಇಂದಿರಾ ನಗರದಲ್ಲಿ ತಡರಾತ್ರಿ ಗುಡ್ಡ ಕುಸಿದು ಬಿದ್ದ ಪರಿಣಾಮ ಶೆಡ್‌ನಲ್ಲಿದ್ದ ಮಗು ಸೇರಿದಂತೆ ಒಂದೇ ಕುಟುಂಬದ ಮೂವರು ಮಣ್ಣಿನಡಿಯಲ್ಲಿ ಸಿಲುಕಿ ದುರ್ಮರಣ ಹೊಂದಿದ್ದಾರೆ.

ಶಿವಮೊಗ್ಗ ಹಾಗೂ ತೀರ್ಥಹಳ್ಳಿ ಸುತ್ತಮುತ್ತ ತಡರಾತ್ರಿ 2:30ರ ಸುಮಾರಿಗೆ ಭಾರೀ ಮಳೆಯಾಗುತ್ತಿತ್ತು. ಈ ವೇಳೆ ಇಂದಿರಾ ನಗರದಲ್ಲಿ ಸಮೀಪದ ಗುಡ್ಡ ಏಕಾಏಕಿ ಕುಸಿದು ಬಿದ್ದಿದೆ. ಈ ಗುಡ್ಡದ ಕೆಳಭಾಗದಲ್ಲಿ ಶೆಡ್ ನಿರ್ಮಿಸಿಕೊಂಡು ವಾಸವಿದ್ದ ಕುಟುಂಬದ ಮೇಲೆ ಮಣ್ಣಿನ ರಾಶಿ ಬಿದ್ದಿದ್ದರಿಂದ ಈ ಅನಾಹುತ ಸಂಭವಿಸಿದೆ. ಘಟನೆಯಲ್ಲಿ ಪಕ್ಕದ ಶೆಡ್‌ನಲ್ಲಿದ್ದವರಿಗೂ ಗಂಭೀರ ಗಾಯಗಳಾಗಿವೆ.

ದುರಂತದಲ್ಲಿ ಮೃತಪಟ್ಟವರನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕೊಕ್ಕರೆಗಾರು ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ. ಮಲ್ಲಿಕಾರ್ಜುನ (35), ನಾಗವೇಣಿ (28),ಸಂತೋಷ (3 - ಮಗು) ಮಣ್ಣಿನಡಿ ಸಿಲುಕಿ ಉಸಿರುಗಟ್ಟಿ ಮೂವರೂ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವವರನ್ನು ತಕ್ಷಣವೇ ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸಿದರು. ಅವಘಡ ನಡೆದ ಜಾಗ ಸಂಪೂರ್ಣ ಮಣ್ಣಿನಲ್ಲಿ ಹೂತು ಹೋಗಿದ್ದರಿಂದ ಶವಗಳನ್ನು ಹೊರತೆಗೆಯಲು ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದುರಂತ ಸಂಭವಿಸಿದ ಸ್ಥಳಕ್ಕೆ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದಲ್ಲೇ ಇದ್ದು ತೆರವು ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ ಶಾಸಕರು, ತಕ್ಷಣವೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿ ಘಟನೆಯ ವಿವರಣೆ ನೀಡಿದರು. ಮೃತಪಟ್ಟ ಬಡ ಕುಟುಂಬಕ್ಕೆ ಸೂಕ್ತ ಪರಿಹಾರ ಧನ ಒದಗಿಸುವಂತೆ ಅವರು ಸಿಎಂ ಅವರಲ್ಲಿ ಕೋರಿದ್ದಾರೆ.

Topics

ಸಂಬಂಧಿತ ಸುದ್ದಿಗಳು