Kannada News Next

karnataka

ಕೈಕೊಟ್ಟ ಮುಂಗಾರು, ಕುಸಿದ ಇಳುವರಿ : ಗಗನಕ್ಕೇರಿದ ಅಕ್ಕಿ, ತೊಗರಿ ಬೆಲೆ

ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ 25 ಕೆ.ಜಿ. ತೂಕದ ಸೋನಾಮಸೂರಿ ಅಕ್ಕಿ ಚೀಲದ ಬೆಲೆಯು ಕನಿಷ್ಠ 300 ರೂಪಾಯಿಗಳಿಂದ ಗರಿಷ್ಠ 400 ರೂಪಾಯಿಗಳವರೆಗೆ ಭಾರಿ ಏರಿಕೆ ಕಂಡಿದೆ.

By ರಶ್ಮಿ ಎಸ್. | Rashmi S
Monsoon Failure Rice Toor Price Hike copy

ಬೆಂಗಳೂರು : ರಾಜ್ಯದಲ್ಲಿ ದಿನಬಳಕೆಯ ಅತ್ಯಗತ್ಯ ಆಹಾರ ಧಾನ್ಯಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಸಾರ್ವಜನಿಕರಿಗೆ ದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಕೇವಲ ನಾಲ್ಕು ತಿಂಗಳ ಅಲ್ಪಾವಧಿಯಲ್ಲಿಯೇ ಬರೋಬ್ಬರಿ ನಾಲ್ಕನೇ ಬಾರಿಗೆ ಅಕ್ಕಿ ದರ ಹೆಚ್ಚಳವಾಗುವ ಮೂಲಕ ಗ್ರಾಹಕರಿಗೆ ಮತ್ತೊಂದು ಶಾಕ್ ಎದುರಾಗಿದೆ.

ಪ್ರಮುಖವಾಗಿ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ 25 ಕೆ.ಜಿ. ತೂಕದ ಸೋನಾಮಸೂರಿ ಅಕ್ಕಿ ಚೀಲದ ಬೆಲೆಯು ಕನಿಷ್ಠ 300 ರೂಪಾಯಿಗಳಿಂದ ಗರಿಷ್ಠ 400 ರೂಪಾಯಿಗಳವರೆಗೆ ಭಾರಿ ಏರಿಕೆ ಕಂಡಿದೆ. ಇದರಿಂದಾಗಿ ಈ ಹಿಂದೆ ಯಶವಂತಪುರ ಮಾರುಕಟ್ಟೆಯಲ್ಲಿ 1,430 ರೂಪಾಯಿಗಳಿದ್ದ ಅಕ್ಕಿ ಚೀಲದ ಸಗಟು ದರವು ಪ್ರಸ್ತುತ 1,820 ರೂಪಾಯಿಗಳಿಗೆ ತಲುಪಿದೆ.

ಈ ಭಾರಿ ಬೆಲೆ ಏರಿಕೆಗೆ ಮುಂಗಾರು ಮಳೆಯ ಕೊರತೆ ಮತ್ತು ರಾಜ್ಯದಲ್ಲಿ ಉಂಟಾಗಿರುವ ಬರಗಾಲದ ಪರಿಸ್ಥಿತಿಯೇ ಮುಖ್ಯ ಕಾರಣವೆಂದು ವಿಶ್ಲೇಷಿಸಲಾಗಿದೆ. ನೀರಿನ ಕೊರತೆಯಿಂದಾಗಿ ಭತ್ತದ ಇಳುವರಿಯಲ್ಲಿ ಗಣನೀಯ ಕುಸಿತ ಉಂಟಾಗಿದ್ದು, ರೈಸ್ ಮಿಲ್ ಮತ್ತು ಗೋದಾಮುಗಳಲ್ಲಿ ಅಗತ್ಯವಿರುವಷ್ಟು ದಾಸ್ತಾನು ಲಭ್ಯವಿಲ್ಲ.

ಭತ್ತ ಬೆಳೆಯುವ ಪ್ರಮುಖ ನೀರಾವರಿ ಪ್ರದೇಶಗಳಾದ ರಾಯಚೂರು, ಸಿಂಧನೂರು ಮತ್ತು ಸಿರಗುಪ್ಪ ಭಾಗಗಳಿಗೆ ತುಂಗಭದ್ರಾ ಜಲಾಶಯದಿಂದ ಈ ಬಾರಿ ಸೂಕ್ತವಾಗಿ ನೀರು ಹರಿಸಲಾಗಿಲ್ಲ. ಸೆಪ್ಟೆಂಬರ್ ತಿಂಗಳು ಮುಗಿಯುತ್ತಿದ್ದರೂ ನೀರು ಸಿಗದ ಕಾರಣ ಈ ಭಾಗದ ರೈತರಿಗೆ ಭತ್ತದ ಬೆಳೆ ತೆಗೆಯಲು ಸಾಧ್ಯವಾಗಿಲ್ಲ. ಪರಿಣಾಮವಾಗಿ ಮಾರುಕಟ್ಟೆಗೆ ಅಕ್ಕಿಯ ಆವಕ ಸಂಪೂರ್ಣವಾಗಿ ಕಡಿಮೆಯಾಗಿದೆ.

ಈ ದರ ಏರಿಕೆಯ ಬಿಸಿ ಕೇವಲ ಸೋನಾಮಸೂರಿಗೆ ಮಾತ್ರ ಸೀಮಿತವಾಗಿಲ್ಲ. ಮಾರುಕಟ್ಟೆಯಲ್ಲಿ ಬಾಸ್ಮತಿ ಅಕ್ಕಿ ದರ 120 ರೂಪಾಯಿಗಳಿಗೆ, ಜೀರಾ ರೈಸ್ 125 ರೂಪಾಯಿಗಳಿಗೆ ಹಾಗೂ ರಾಜಮುಡಿ ಅಕ್ಕಿ ದರ ಪ್ರತಿ ಕೆ.ಜಿ.ಗೆ 150 ರೂಪಾಯಿಗಳಿಗೆ ಏರಿಕೆಯಾಗಿದೆ.

ಜುಲೈ ತಿಂಗಳಲ್ಲಿ 55 ರಿಂದ 60 ರೂಪಾಯಿಗಳಿದ್ದ ಸೋನಾಮಸೂರಿ ಅಕ್ಕಿ ದರವು ಅಕ್ಟೋಬರ್ ವೇಳೆಗೆ 76 ರೂಪಾಯಿ ತಲುಪಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ 88 ರೂಪಾಯಿಗಳವರೆಗೆ ಮಾರಾಟವಾಗುತ್ತಿದೆ. ಇದರ ಜೊತೆಗೆ ನಿತ್ಯ ಬಳಕೆಯ ತೊಗರಿ ಬೇಳೆ ದರವು ಕೂಡ ಪ್ರತಿ ಕೆ.ಜಿ.ಗೆ 110 ರಿಂದ 150 ರೂಪಾಯಿಗಳವರೆಗೆ ಹೆಚ್ಚಳವಾಗಿದ್ದು, ಮಧ್ಯಮ ವರ್ಗದ ಗ್ರಾಹಕರು ಜೀವನ ನಡೆಸಲು ಪರದಾಡುವಂತಾಗಿದೆ.​