ಮೈಸೂರು ದಸರಾ ಮಹೋತ್ಸವಕ್ಕೆ ಜಾಗತಿಕ ಸ್ಪರ್ಶ: ದಕ್ಷಿಣ ಭಾರತದ ಸಿಎಮ್‌ಗಳು, ವಿವಿಧ ದೇಶಗಳ ರಾಯಭಾರಿಗಳಿಗೆ ಆಹ್ವಾನ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಈ ಬಾರಿ ಅತ್ಯಂತ ವೈಭವೋಪೇತವಾಗಿ ಆಚರಿಸಲು ಕರ್ನಾಟಕ ರಾಜ್ಯ ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

By ರಶ್ಮಿ ಎಸ್. | Rashmi S

1 min read

WhatsAppPost
mysuru-dasara-celebrations-south-indian-cm-invited
mysuru-dasara-celebrations-south-indian-cm-invited

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಈ ಬಾರಿ ಅತ್ಯಂತ ವೈಭವೋಪೇತವಾಗಿ ಆಚರಿಸಲು ಕರ್ನಾಟಕ ರಾಜ್ಯ ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈಗಾಗಲೇ ಅರಮನೆ ನಗರಿಗೆ ಗಜಪಡೆ ಆಗಮಿಸಿ ತಾಲೀಮು ಆರಂಭಿಸಿದ್ದು, ಹಬ್ಬದ ಸಂಭ್ರಮ ಕಳೆಗಟ್ಟಿದೆ. ಇತ್ತೀಚೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ, ದಸರಾ ಉತ್ಸವದ ವ್ಯಾಪ್ತಿಯನ್ನು ಜಾಗತಿಕ ಮಟ್ಟಕ್ಕೆ ವಿಸ್ತರಿಸಲು ಹಲವು ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.

ಈ ಬಾರಿಯ ದಸರಾದ ಪ್ರಮುಖ ಆಕರ್ಷಣೆಯೆಂದರೆ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಮಹಾಸಂಗಮ. ನೆರೆರಾಜ್ಯಗಳ ಸಿಎಂಗಳ ಜೊತೆಗೆ ವಿವಿಧ ದೇಶಗಳ ರಾಯಭಾರಿಗಳಿಗೂ ವಿಶೇಷ ಆಹ್ವಾನ ನೀಡಲು ನಿರ್ಧರಿಸಲಾಗಿದೆ. ಇದರೊಂದಿಗೆ ಇಡೀ ದಕ್ಷಿಣ ಭಾರತದ ಪ್ರಸಿದ್ಧ ಕಲಾತಂಡಗಳು ಹಾಗೂ ರಾಜ್ಯದ ಮೂಲೆ ಮೂಲೆಗಳ ಜಾನಪದ ಕಲಾವಿದರು ಮೈಸೂರಿನಲ್ಲಿ ತಮ್ಮ ಕಲಾಪ್ರದರ್ಶನ ನೀಡಲಿದ್ದಾರೆ.

ಹಬ್ಬಕ್ಕೆ ಮತ್ತಷ್ಟು ರೋಮಾಂಚನ ನೀಡಲು ಕೇಂದ್ರ ರಕ್ಷಣಾ ಸಚಿವಾಲಯದ ಸಹಯೋಗದೊಂದಿಗೆ ಭವ್ಯ ಏರ್ ಷೋ ಆಯೋಜಿಸಲು ಚರ್ಚೆ ನಡೆಸಲಾಗಿದೆ. ಭಾರತೀಯ ಭೂಸೇನೆ, ವಾಯುಸೇನೆ ಹಾಗೂ ನೌಕಾಪಡೆಗಳ ವಿಶೇಷ ಸ್ತಬ್ಧಚಿತ್ರಗಳು ಮತ್ತು ಕವಾಯತು ತಂಡಗಳು ಈ ಬಾರಿ ಭಾಗವಹಿಸಲಿವೆ. ಅಲ್ಲದೆ, ಇಸ್ರೋ ಮತ್ತು ಡಿಆರ್‌ಡಿಒ ನಂತಹ ಪ್ರತಿಷ್ಠಿತ ಸಂಸ್ಥೆಗಳಿಗೂ ಆಹ್ವಾನ ನೀಡಲಾಗುತ್ತಿದೆ.

ಸಾರ್ವಜನಿಕರನ್ನು ಆಕರ್ಷಿಸಲು ರಾತ್ರಿಯ ವೇಳೆಯಲ್ಲಿ ಅದ್ಭುತ ಡ್ರೋನ್ ಪ್ರದರ್ಶನ, ಹಳೆಯ ಕಾಲದ ಕಾರುಗಳ ವಿಂಟೇಜ್ ರ್ಯಾಲಿ, ಚಿತ್ರಸಂತೆ, ಫ್ಲೀ ಮಾರ್ಕೆಟ್ ಮತ್ತು ರಂಗೋಲಿ ಸ್ಪರ್ಧೆಗಳಂತಹ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಪ್ರವಾಸಿಗರಿಗೆ ಆಸನ ಹಾಗೂ ಟಿಕೆಟ್ ವ್ಯವಸ್ಥೆಯಲ್ಲಿ ಯಾವುದೇ ಗೊಂದಲವಾಗದಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಉತ್ಸವದ ಯಶಸ್ಸಿಗಾಗಿ ಪ್ರತಿದಿನ ಒಬ್ಬ ಸಚಿವರನ್ನು ಉಸ್ತುವಾರಿಯಾಗಿ ನೇಮಿಸಲು ನಿರ್ಧರಿಸಲಾಗಿದ್ದು, ಮೈಸೂರಿನ ಪ್ರವಾಸೋದ್ಯಮಕ್ಕೆ ಜಾಗತಿಕ ಮಟ್ಟದಲ್ಲಿ ಪ್ರಚಾರ ನೀಡಲು ವಿಶೇಷ ಕಿರುಚಿತ್ರಗಳನ್ನು ಸಹ ಸಿದ್ಧಪಡಿಸಲಾಗುತ್ತಿದೆ.

Topics

ಸಂಬಂಧಿತ ಸುದ್ದಿಗಳು