News Next Kannada

karnataka

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಹೆಸರಿನಲ್ಲಿ ಡೀಪ್​ಫೇಕ್​ ವಿಡಿಯೋ : ಶಿಕ್ಷಕಿಗೆ ಪಂಗನಾಮ

ಇತ್ತೀಚೆಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಷೇರು ಮಾರುಕಟ್ಟೆಯ ಹೂಡಿಕೆಯ ಕುರಿತು ಮಾತನಾಡುತ್ತಿರುವ ವಿಡಿಯೋ ಒಂದನ್ನು ವೀಕ್ಷಿಸಿದ್ದರು.

By ರಶ್ಮಿ ಎಸ್. | Rashmi S
nirmala-sitharaman-deepfake-video-cyber-scam-bengaluru-teacher-loses-lakhs

ಆಧುನಿಕ ತಂತ್ರಜ್ಞಾನದ ಬೆಳವಣಿಗೆಯು ಸಮಾಜಕ್ಕೆ ವರದಾನವಾಗುವಷ್ಟೇ ವೇಗವಾಗಿ ಸೈಬರ್ ಅಪರಾಧಿಗಳ ಪಾಲಿಗೆ ಹೊಸ ಅಸ್ತ್ರವಾಗುತ್ತಿದೆ. ಇತ್ತೀಚೆಗೆ ಕೃತಕ ಬುದ್ಧಿಮತ್ತೆ ದೀಪ್‌ಫೇಕ್ ತಂತ್ರಜ್ಞಾನದ ಮೂಲಕ ಸೃಷ್ಟಿಸಲಾಗುವ ನಕಲಿ ದೃಶ್ಯಾವಳಿಗಳು ಸಾರ್ವಜನಿಕರನ್ನು ದಿಕ್ಕುತಪ್ಪಿಸುತ್ತಿವೆ. ಇದಕ್ಕೆ ಲೇಟೆಸ್ಟ್ ಉದಾಹರಣೆಯಾಗಿ, ದೇಶದ ಗಣ್ಯ ವ್ಯಕ್ತಿಗಳ ವಿಡಿಯೋಗಳನ್ನು ದುರುಪಯೋಗಪಡಿಸಿಕೊಂಡು ಆನ್‌ಲೈನ್ ಮೂಲಕ ದೊಡ್ಡ ಮಟ್ಟದ ವಂಚನೆ ಎಸಗುತ್ತಿರುವ ಜಾಲವೊಂದು ಸಕ್ರಿಯವಾಗಿದೆ.

ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಐವತ್ತೆಂಟು ವರ್ಷದ ಹಿರಿಯ ಶಿಕ್ಷಕಿಯೊಬ್ಬರು ಇಂತಹದ್ದೇ ಒಂದು ವಂಚಕ ಜಾಲಕ್ಕೆ ಸಿಲುಕಿ ತಮ್ಮ ಜೀವನದ ಪ್ರಮುಖ ಉಳಿತಾಯವಾದ ಸುಮಾರು 30.63 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಇತ್ತೀಚೆಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಷೇರು ಮಾರುಕಟ್ಟೆಯ ಹೂಡಿಕೆಯ ಕುರಿತು ಮಾತನಾಡುತ್ತಿರುವ ವಿಡಿಯೋ ಒಂದನ್ನು ವೀಕ್ಷಿಸಿದ್ದರು. ಆ ವಿಡಿಯೋದಲ್ಲಿ ಅಧಿಕ ಲಾಭದ ಭರವಸೆ ನೀಡುವ ಲಿಂಕ್ ಒಂದನ್ನು ನೀಡಲಾಗಿತ್ತು. ಆದರೆ, ಅದು ಅಪರಾಧಿಗಳು ತಂತ್ರಜ್ಞಾನ ಬಳಸಿ ಸೃಷ್ಟಿಸಿದ್ದ ಸಂಪೂರ್ಣ ನಕಲಿ ವಿಡಿಯೋ ಎಂಬ ಸತ್ಯ ಅರಿಯದ ಶಿಕ್ಷಕಿ, ಆ ಲಿಂಕ್ ಕ್ಲಿಕ್ ಮಾಡಿ ಹೂಡಿಕೆ ಮಾಡಲು ಆಸಕ್ತಿ ತೋರಿಸಿದ್ದಾರೆ.

ಇದರ ಬೆನ್ನಲ್ಲೇ ಅಪರಿಚಿತ ವ್ಯಕ್ತಿಗಳು ವಾಟ್ಸ್ಯಾಪ್ ಮೂಲಕ ಶಿಕ್ಷಕಿಯನ್ನು ಸಂಪರ್ಕಿಸಿ, ತಾವೇ ಹೂಡಿಕೆಗೆ ಮಾರ್ಗದರ್ಶನ ನೀಡುವುದಾಗಿ ನಂಬಿಸಿದ್ದಾರೆ. ಅವರ ಮಾತುಗಳನ್ನು ನಂಬಿ ಹಂತ-ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ದೊಡ್ಡ ಮೊತ್ತದ ಹಣವನ್ನು ವರ್ಗಾಯಿಸಿದ್ದಾರೆ. ತದನಂತರ ತಾವು ಹೂಡಿದ ಹಣ ಅಥವಾ ಲಾಭ ವಾಪಸ್ ಸಿಗದೇ ಇದ್ದಾಗ ಮತ್ತು ವಂಚಕರು ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಾಗ ಅವರಿಗೆ ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಈ ಕುರಿತು ಸದ್ಯ ಬೆಂಗಳೂರಿನ ಪೂರ್ವ ವಿಭಾಗದ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ನಗರದಲ್ಲಿ ಇಂತಹ ಹೂಡಿಕೆ ವಂಚನೆಗಳು ತೀವ್ರವಾಗಿ ಹೆಚ್ಚುತ್ತಿದ್ದು, ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಗಣ್ಯ ವ್ಯಕ್ತಿಗಳ ಹೂಡಿಕೆ ಸಲಹೆಗಳ ವಿಡಿಯೋಗಳನ್ನು ಕುರುಡಾಗಿ ನಂಬಬಾರದು ಎಂದು ಪೊಲೀಸರು ಎಚ್ಚರಿಸಿದ್ದಾರೆ. ಯಾವುದೇ ಆಮಿಷಗಳಿಗೆ ಒಳಗಾಗದೆ, ಸೆಬಿ ನೋಂದಾಯಿತ ಅಧಿಕೃತ ಸಂಸ್ಥೆಗಳ ಮೂಲಕವೇ ವ್ಯವಹಾರ ನಡೆಸಲು ಹಿರಿಯ ಅಧಿಕಾರಿಗಳು ನಾಗರಿಕರಲ್ಲಿ ಮನವಿ ಮಾಡಿದ್ದಾರೆ.