ಬೆಂಗಳೂರು : ಅತ್ಯಾಚಾರದ ಆರೋಪ ಹೊತ್ತು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್ ರೇವಣ ಮೊಬೈಲ್ ಬಳಸಿದ ಬೆನ್ನಲ್ಲೇ ಇದೀಗ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಮಾರಾಟ ದಂಧೆ ನಡೆದಿರೋದು ಬೆಳಕಿಗೆ ಬಂದಿದೆ. ಅದರಲ್ಲೂ ವಿಚಾರಣಾಧೀನ ಕೈದಿಯೋರ್ವ ಬರೋಬ್ಬರಿ 45 ಸಾವಿರ ರೂಪಾಯಿ ಮೊಬೈಲ್ ಮಾರಾಟ ಮಾಡ್ತಾ ಇರೋದನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಎರಡು ವರ್ಷಗಳ ಹಿಂದೆ ನಡೆದಿದ್ದ ಪ್ರಕರಣ ತನಿಖೆಯನ್ನು ಸಿಸಿಬಿ ಪೊಲೀಸರು ಇದೀಗ ಚುರುಕುಗೊಳಿಸಿದ್ದಾರೆ. ಅಲ್ಪೋನ್ಸಾ ರಾಜಾ ಅಲಿಯಾಸ್ ಮಚ್ಚಾ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ.
ಈ ವೇಳೆಯಲ್ಲಿ ವಿವೋ ಮೊಬೈಲ್ ಅನ್ನು ತಾನು ಕೊಲೆ ಪ್ರಕರಣದ ಆರೋಪಿಗಳಿಗೆ 45 ಸಾವಿರ ರೂಪಾಯಿ ಮಾರಾಟ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಮೊಬೈಲ್ ಮಾರಾಟ ಹಣವನ್ನು ತನ್ನ ಸಹಚರನ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದೆ ಅನ್ನೋ ಮಾಹಿತಿಯನ್ನು ಇದೀಗ ವಿಚಾರಣೆಯ ವೇಳೆಯಲ್ಲಿ ಬಾಯ್ಬಿಟ್ಟಿದ್ದಾನೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಳೆದ ಹಲವು ವರ್ಷಗಳಿಂದಲೂ ಮೊಬೈಲ್ ಮಾರಾಟದ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ ಅನ್ನೋದಕ್ಕೆ ಒಂದಿಷ್ಟು ಸಾಕ್ಷ್ಯಗಳು ಇದೀಗ ಲಭ್ಯವಾಗಿದೆ. 2024ರಲ್ಲಿ ಪರಪ್ಪನ ಅಗ್ರಹಾರ ಜೈಲಿನ ಎಂಟನೇ ಬ್ಯಾರಕ್‌ನಲ್ಲಿ ಅಧಿಕಾರಿಗಳ ತಪಾಸಣೆಯ ವೇಳೆಯಲ್ಲಿ ಒಂದು ಸ್ಮಾರ್ಟ್‌ಪೋನ್ ಹಾಗೂ ಒಂದು ಕೀ ಪ್ಯಾಡ್ ಮೊಬೈಲ್ ಪತ್ತೆಯಾಗಿತ್ತು. ಈ ವೇಳೆಯಲ್ಲಿ ಮೊಬೈಲ್ ಬಳಕೆ ಮಾಡಿದವರ ವಿರುದ್ದ ಕ್ರಮಕೈಗೊಳ್ಳುವಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಆನೇಕಲ್‌ನ ಮಧೂಸೂಧನ್ ಹಾಗೂ ಶಶಿಕುಮಾರ್ ಮೊಬೈಲ್ ಬಳಕೆ ಮಾಡಿದ ಆರೋಪ ಎದುರಿಸುತ್ತಿದ್ರೆ, ಮೊಬೈಲ್ ಮಾರಾಟ ಮಾಡಿದ್ದ ಕುಖ್ಯಾತ ರೌಡಿ ಸತೀಶ್ ಅಲಿಯಾಸ್ ಮಿಲ್ಟ್ರಿ ಸತೀಶ್ ಕೊಲೆ ಪ್ರಕರಣ ಆರೋಪಿ ಅಲ್ಪೋನ್ಸಾನನ್ನು ಕೂಡ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆಯಲ್ಲಿ ಮೊಬೈಲ್ ಮಾರಾಟ ಜಾಲ ಬಯಲಾಗಿದೆ. ಆದರೆ ಜೈಲಿನ ಒಳಗೆ ಮೊಬೈಲ್ ಸಪ್ಲೈ ಮಾಡಿದ್ದು ಯಾರು ಅನ್ನೋದು ತನಿಖೆಯಿಂದಷ್ಟೇ ಹೊರ ಬರೋದಕ್ಕೆ ಸಾಧ್ಯ.