Kannada News Next

karnataka

ಜಾಮೀನು ರದ್ದತಿ ಬೆನ್ನಲ್ಲೇ ಜೈಲಿನಲ್ಲಿ ಪವಿತ್ರಾಗೆ ಹೊಸ ಸಂಕಷ್ಟ

ಜೈಲಿನ ನಿಯಮಾವಳಿಗಳ ಪ್ರಕಾರ ಕೈದಿಗಳ ಸುರಕ್ಷತೆ ಮುಖ್ಯವಾಗಿರುವುದರಿಂದ ಕೋರ್ಟ್ ಈ ಅರ್ಜಿಯನ್ನು ಹೇಗೆ ಪರಿಗಣಿಸಲಿದೆ ಎಂಬ ಕುತೂಹಲ ಮೂಡಿದೆ.

By ರಶ್ಮಿ ಎಸ್. | Rashmi S
Pavithra gowda jail new trouble after bail cancellation

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸಿಲುಕಿ ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟಿ ಪವಿತ್ರಾ ಗೌಡ ಅವರಿಗೆ ಜೈಲಿನಲ್ಲಿ ಹೊಸದೊಂದು ಸಂಕಷ್ಟ ಎದುರಾಗಿದೆ. ಜೈಲಿನ ಸಹ-ಕೈದಿಗಳ ವರ್ತನೆ ಹಾಗೂ ಕಿರುಕುಳದಿಂದ ಬೇಸತ್ತಿರುವ ಅವರು, ತಂಗಿರುವ ಬ್ಯಾರಕ್ ಅನ್ನು ಬದಲಾಯಿಸುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈ ಮನವಿಗೆ ಸಂಬಂಧಿಸಿದಂತೆ ಬೆಂಗಳೂರಿನ 59ನೇ ಸಿಸಿಹೆಚ್ ನ್ಯಾಯಾಲಯವು ಇಂದು ಮಹತ್ವದ ತೀರ್ಪನ್ನು ಪ್ರಕಟಿಸಲಿದೆ.

ನಟ ದರ್ಶನ್ ಆಪ್ತ ಗೆಳತಿಯಾಗಿರುವ ಪವಿತ್ರಾ ಗೌಡ, ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ. ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್‌ನಲ್ಲಿ ಇವರ ಜಾಮೀನು ಅರ್ಜಿ ರದ್ದಾಗಿದ್ದರಿಂದ ಸುದೀರ್ಘ ಕಾಲ ಜೈಲಿನಲ್ಲೇ ಕಳೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದರ ಬೆನ್ನಲ್ಲೇ ಜೈಲಿನೊಳಗಿನ ವಾತಾವರಣ ಅವರಿಗೆ ಮತ್ತಷ್ಟು ತಲೆನೋವು ತಂದಿಟ್ಟಿದೆ. ಒಂದೇ ಬ್ಯಾರಕ್‌ನಲ್ಲಿರುವ ಇತರ ಮಹಿಳಾ ಕೈದಿಗಳು ತಮ್ಮ ಅನುಮತಿಯಿಲ್ಲದೆಯೇ ಬಟ್ಟೆಗಳನ್ನು ಬಳಸುತ್ತಿದ್ದಾರೆ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಪವಿತ್ರಾ ಗೌಡ ಗಂಭೀರವಾಗಿ ಆರೋಪಿಸಿದ್ದಾರೆ.

ಸಹ ಕೈದಿಗಳ ನಿರಂತರ ಹಸ್ತಕ್ಷೇಪ ಹಾಗೂ ಟಾರ್ಚರ್‌ನಿಂದ ಜೈಲಿನಲ್ಲಿ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಕ್ಷಣವೇ ಸುರಕ್ಷಿತವಾಗಿರುವ ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸಲು ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಅವರು ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಜೈಲಿನ ನಿಯಮಾವಳಿಗಳ ಪ್ರಕಾರ ಕೈದಿಗಳ ಸುರಕ್ಷತೆ ಮುಖ್ಯವಾಗಿರುವುದರಿಂದ ಕೋರ್ಟ್ ಈ ಅರ್ಜಿಯನ್ನು ಹೇಗೆ ಪರಿಗಣಿಸಲಿದೆ ಎಂಬ ಕುತೂಹಲ ಮೂಡಿದೆ.

ಈಗಾಗಲೇ ಕೊಲೆ ಪ್ರಕರಣದ ತನಿಖೆ ಚುರುಕಾಗಿದ್ದು, ಸಾಕ್ಷ್ಯಗಳ ರಕ್ಷಣೆಗಾಗಿ ಆರೋಪಿಗಳನ್ನು ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರಿಸುವ ಚರ್ಚೆಗಳ ಬೆನ್ನಲ್ಲೇ ಪವಿತ್ರಾ ಗೌಡ ಅವರ ಈ ಹೊಸ ನಡೆ ತೀವ್ರ ಸಂಚಲನ ಮೂಡಿಸಿದೆ. ಇಂದು ಹೊರಬೀಳಲಿರುವ ಕೋರ್ಟ್ ಆದೇಶದ ಮೇಲೆ ಪವಿತ್ರಾ ಅವರ ಮುಂದಿನ ಜೈಲು ವಾಸದ ದಿನಗಳು ನಿರ್ಧಾರವಾಗಲಿವೆ.