Kannada News Next

karnataka

ಪ್ರವಾಸೋದ್ಯಮದ ಚಟುವಟಿಕೆಗಳಿಗೆ ಬಳಸುವ ಯೋಜನೆ ಕೈ ಬಿಟ್ಟು ವಿಜ್ಞಾನ ಹಾಗೂ ತಂತ್ರಜ್ಞಾನ ಬಳಕೆಗೆ ಪಿಲಿಕುಳಕ್ಕೆ ಭೂಮಿ ನೀಡಲು ನಿರ್ಧರಿಸಿದ ಸರ್ಕಾರ!

ಪಿಲಿಕುಲ ನಿಸರ್ಗಧಾಮ ಆದಾಯ ತರುತ್ತಿಲ್ಲ ಎಂಬ ಕಾರಣ ನೀಡಿ ಹೋಟೆಲ್ ಹಾಗೂ ಇತರ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಪಿಲಿಕುಳದ ಭೂಮಿಯನ್ನು ನೀಡಲು ಕೆಲವರು ಸಲಹೆ ನೀಡಿದರು ಎನ್ನಲಾಗಿದೆ.

By Arun Gundmi | ಅರುಣ್‌ ಗುಂಡ್ಮಿ Editor-in-Chief
pilikula land science technology tourism karnataka government

ಮಂಗಳೂರು: ಪಿಲಿಕುಲ ನಿಸರ್ಗಧಾಮ ಆದಾಯ ತರುತ್ತಿಲ್ಲ ಎಂಬ ಕಾರಣ ನೀಡಿ ಹೋಟೆಲ್ ಹಾಗೂ ಇತರ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಪಿಲಿಕುಳದ ಭೂಮಿಯನ್ನು ನೀಡಲು ಕೆಲವರು ಸಲಹೆ ನೀಡಿದರು ಎನ್ನಲಾಗಿದೆ.

ಆದರೆ ಇದಕ್ಕೆ ಸೊಪ್ಪು ಹಾಕದ ಡಿಕೆ ಶಿವಕುಮಾರ್ , ರಾಜ್ಯದ ಮುಖ್ಯಮಂತ್ರಿಯಾಗಿ ಪ್ರವಾಸೋದ್ಯಮ ಹಾಗೂ ಪರಿಸರ ಶಿಕ್ಷಣವನ್ನು ಸಮದೂಗಿಸಲು ಪ್ರಯತ್ನಿಸಿರುವುದು ಕ್ರಾಂತಿಕಾರಿ ಹೆಜ್ಜೆ ಎಂದು ತಜ್ಞರ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

ಎಲ್ಲವನ್ನು ಪ್ರವಾಸೋದ್ಯಮದ ನೆಲೆಯಲ್ಲಿ ಕಾಣದೆ, ಭವಿಷ್ಯದ ಮಕ್ಕಳಿಗೆ ಪರಿಸರ ಶಿಕ್ಷಣ ನೀಡುವ, ವಿಜ್ಞಾನ ತಂತ್ರಜ್ಞಾನಕ್ಕೆ ಪ್ರೋತ್ಸಾಹ ನೀಡುವುದು ಅಗತ್ಯ ಎಂಬ ಸಂದೇಶವನ್ನು ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರ ರವಾನಿಸಿದೆ ಎಂದು ಈ ಮೂಲಕ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ವಿಧಾನ ಮಂಡಲದ ಶಾಸಕರು ಶ್ರೀನಿವಾಸ್ ನೇತೃತ್ವದ ಸಮಿತಿ ಮಂಗಳೂರಿಗೆ ಜುಲೈ 24ರಂದು ಭೇಟಿ ನೀಡಿದ ಸಂದರ್ಭದಲ್ಲಿ ಮಂಗಳೂರಿನಲ್ಲಿ ನಡೆದ ಸಭೆಯಲ್ಲಿ, ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಪಿಲಿಕುಲ ನಿಸರ್ಗಧಾಮ ಸ್ಥಾಪನೆಯ ಉದ್ದೇಶ ಹಾಗೂ ಅದನ್ನು ಈಗ ಬೇರೆ ಉದ್ದೇಶಗಳಿಗೆ ಬಳಸುವ ಯೋಚನೆಯನ್ನು ಪ್ರಶ್ನಿಸಿದ್ದರು.

ಕರ್ನಾಟಕದಲ್ಲಿ ಕೆಲವೇ ಕೆಲವು ವಿಜ್ಞಾನ ತಂತ್ರಜ್ಞಾನ , ಪರಿಸರ ಸಂಶೋಧನೆಗೆ ಮೀಸಲಾದ ಸಂಸ್ಥೆಗಳಲ್ಲಿ ಪಿಲಿಕುಲವು ಒಂದು ಎಂದು ಮಂತರ್ ಗೌಡ ಒತ್ತಿ ಹೇಳಿದ್ದರು. ಇಂಥ ಸಂದರ್ಭದಲ್ಲಿ ಭವಿಷ್ಯದ ಮಕ್ಕಳಿಗೆ ಜ್ಞಾನ ಹಾಗೂ ಮಾಹಿತಿಯನ್ನು ನೀಡಲು ಪಿಲಿಕುಲ ಉಪಯೋಗವಾಗಬೇಕೆ ಹೊರತು ಪ್ರವಾಸೋದ್ಯಮದ ಹಾಗೂ ಇತರ ಚಟುವಟಿಕೆಗಳಿಗೆ ಅಲ್ಲ ಎಂಬುದನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದರು.

ಪಿಲಿಕುಲ ವಿಷಯದಲ್ಲಿ ಲಾಭ ನಷ್ಟಗಳ ವಿಷಯವನ್ನು ಪರಿಗಣಿಸದೆ ಭವಿಷ್ಯದ ಜನಾಂಗಕ್ಕೆ ಸಂಶೋಧನೆ ಹಾಗೂ ಪರಿಸರ ಜ್ಞಾನ ನೀಡಲು ಬಳಕೆಯಾಗಬೇಕು ಎಂಬ ಡಾ.ಮಂತರ್ ಗೌಡ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಸಮಿತಿ ಹಾಗೂ ಅಧಿಕಾರಿಗಳು ಸರಕಾರಕ್ಕೆ ಮಾರ್ಪಾಡಾದ ಯೋಜನೆಯ ನೀಡಿರುವ ಕಾರಣ ಪಿಲಿಕುಲ ಸಂಶೋಧನೆಗೆ ಒತ್ತು ನೀಡುವ ಸಂಸ್ಥೆಯಾಗಿ ಉಳಿಸಲು ಸರ್ಕಾರ ಕ್ರಾಂತಿಕಾರಕ ನಿರ್ಧಾರ ತಳೆದಿದೆ ಎನ್ನಲಾಗಿದೆ.

ಇದರ ಭಾಗವಾಗಿ ನಿನ್ನೆಯ ಮಂಗಳೂರಿನಲ್ಲಿ ನಡೆದ ಕ್ಯಾಬಿನೆಟ್ ಸಭೆ ಸುಮಾರು 339 ಎಕರೆ ಭೂಮಿಯನ್ನು ವಿಜ್ಞಾನ ತಂತ್ರಜ್ಞಾನ, ಪರಿಸರ ಸಂಶೋಧನೆಗೆ ಒತ್ತು ನೀಡಲು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಗೆ ನೀಡಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಸುಸ್ಥಿರ ಪ್ರವಾಸೋದ್ಯಮ , ವಿಜ್ಞಾನ ಸಂಶೋಧನೆ , ಪರಿಸರ ಸಂರಕ್ಷಣೆಗೆ ಪ್ರಥಮ ಬಾರಿ ಸರ್ಕಾರ ಈ ರೀತಿಯ ಯೋಜನೆಗಳನ್ನು ಜಾರಿಗೊಳಿಸಲು ಯತ್ನಿಸಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ನಿನ್ನೆ ಕ್ಯಾಬಿನೆಟ್ ತೆಗೆದುಕೊಂಡಿರುವ ಪ್ರಮುಖ ನಿರ್ಧಾರಗಳು ಈ ರೀತಿ ಇವೆ.

◼️ಆಡಳಿತದಲ್ಲಿ ಕನ್ನಡ ಭಾಷೆಯ ಜೊತೆಗೆ ತುಳು ಭಾಷೆಯನ್ನು ಸರ್ಕಾರಿ ಉದ್ದೇಶಗಳಿಗಾಗಿ ಕರ್ನಾಟಕ ರಾಜ್ಯದ 2ನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಣೆ. ಮಂಗಳೂರು (ದಕ್ಷಿಣ ಕನ್ನಡ) ಮತ್ತು ಉಡುಪಿ ಜಿಲ್ಲೆಗಳಲ್ಲಿ ಜಾರಿಯಾಗಲಿದ್ದು, ಅನುವಾದ, ತರಬೇತಿ ಹಾಗೂ ಭಾಷಾ ಬಳಕೆಯ ಚಟುವಟಿಕೆಗಳಿಗೆ ಪ್ರತಿ ವರ್ಷ 82 ಲಕ್ಷ ರೂ. ಅನುದಾನ.

◼️'ದಕ್ಷಿಣ ಕನ್ನಡ' ಜಿಲ್ಲೆಯನ್ನು 'ಮಂಗಳೂರು ಜಿಲ್ಲೆ' ಎಂದು ಮರುನಾಮಕರಣ ಮಾಡಲು ಅಧಿಸೂಚನೆ ಹೊರಡಿಸಿದೆ. ಒಂದು ತಿಂಗಳ ಕಾಲಾವಕಾಶ ನೀಡಿ ಜನಾಭಿಪ್ರಾಯ ಸಂಗ್ರಹಿಸಲು ತೀರ್ಮಾನ.

◼️ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಾಳಾಗಿರುವ ರಸ್ತೆಗಳನ್ನು ಸಿಮೆಂಟ್ ಕಾಂಕ್ರೀಟ್ ರಸ್ತೆಯಾಗಿ ಪರಿವರ್ತಿಸಲು ಮತ್ತು ಸಮಗ್ರ ರಸ್ತೆ ಅಭಿವೃದ್ಧಿಗೆ 400 ಕೋಟಿ ರೂ. ವಿಶೇಷ ಅನುದಾನ.

◼️ಮಂಗಳೂರು ತಾಲೂಕಿನ ಗುರುಪುರ ನದಿಯ ಉತ್ತರ (ಮರೀನಾ) ಮತ್ತು ದಕ್ಷಿಣ (ಪರಿಸರ ಹಟ್‌) ದ್ವೀಪಗಳ ಅಭಿವೃದ್ಧಿಗೆ 125.43 ಕೋಟಿ ರೂ. ಅನುದಾನ.

◼️ADB ನೆರವಿನಡಿ ಮಂಗಳೂರು ನಗರ (ವಲಯ 3) ಮತ್ತು ಸುರತ್ಕಲ್ ಪ್ರದೇಶಗಳಲ್ಲಿ ಹಳೆಯ ಒಳಚರಂಡಿ ವ್ಯವಸ್ಥೆಯ ಪುನಶ್ಚೇತನಕ್ಕಾಗಿ 100 ಕೋಟಿ ರೂ. ಅನುಮೋದನೆ.

◼️ಮಂಗಳೂರು ತಾಲೂಕಿನ ಕೋಡಿಕಲ್‌ನಲ್ಲಿ 16.5 ಎಕರೆ ಜಮೀನಿನಲ್ಲಿ Riverfront Wellness Resort ಅಭಿವೃದ್ಧಿಗೆ 73 ಕೋಟಿ ರೂ.

◼️ಮಂಗಳೂರಿನ ಲೈಟ್‌ಹೌಸ್ ಸುತ್ತಲಿನ 1.5 ಎಕರೆ ಪ್ರದೇಶದಲ್ಲಿ 3-ಸ್ಟಾರ್ ಅಥವಾ ಅದಕ್ಕಿಂತ ಮೇಲ್ದರ್ಜೆಯ ಆತಿಥ್ಯ ಮೂಲಸೌಕರ್ಯ ಅಭಿವೃದ್ಧಿಗೆ 60.34 ಕೋಟಿ ರೂ.

◼️ತಣ್ಣೀರುಭಾವಿ 4.97 ಎಕರೆ ಭೂಮಿಯಲ್ಲಿ Beach-front Glamping, ಸಾಗರ ಅನುಭವ ಕೇಂದ್ರ ಹಾಗೂ ಎಕ್ಸ್‌ಪೊ ವಲಯ ಅಭಿವೃದ್ಧಿಗೆ 53 ಕೋಟಿ ರೂ.

◼️ಕೋಟೇಪುರದಿಂದ ಬೋಳಾರದವರೆಗೆ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆಗೆ ಸಂಪರ್ಕ ರಸ್ತೆ ಹಾಗೂ ಬಾಕಿ ಕಾಮಗಾರಿ ಪೂರ್ಣಗೊಳಿಸಲು 50 ಕೋಟಿ ರೂ.

◼️ಮಂಗಳೂರು-ಅತ್ರಾಡಿ ರಾಜ್ಯ ಹೆದ್ದಾರಿಯ ಮರವೂರು ಸೇತುವೆ ನಿರ್ಮಾಣ ಕಾಮಗಾರಿಗೆ 40 ಕೋಟಿ ರೂ.

◼️ಮಂಗಳೂರು ಮೀನುಗಾರಿಕಾ ಕಾಲೇಜಿನ 3 ಎಕರೆ ಜಾಗದಲ್ಲಿ ಅತ್ಯಾಧುನಿಕ ಸಗಟು ಮೀನು ಮಾರುಕಟ್ಟೆ ಅಭಿವೃದ್ಧಿಗೆ 30 ಕೋಟಿ ರೂ.

◼️ಮಂಗಳ ಕ್ರೀಡಾಂಗಣವನ್ನು ಅಂತರರಾಷ್ಟ್ರೀಯ ದರ್ಜೆಗೆ ಏರಿಸಲು 20 ಕೋಟಿ ರೂ.

◼️ಮಂಗಳೂರು ಮೀನುಗಾರಿಕಾ ಬಂದರಿನ ಅಳಿವೆ ಬಾಗಿಲಿನಿಂದ ಕೋಟೇಪುರವರೆಗೆ ಹೂಳೆತ್ತುವುದು, ನೆವಿಗೇಷನ್ ಬಾಯ್ಸ್ ಅಳವಡಿಕೆ, ಕೋಟೇಪುರದಲ್ಲಿ ಜೆಟ್ಟಿ ಮತ್ತು ಬೆಂಗ್ರೆಯಲ್ಲಿ ಬರ್ತಿಂಗ್ ಬೇಸಿನ್ ನಿರ್ಮಾಣ ಕಾಮಗಾರಿಗಳಿಗೆ 20 ಕೋಟಿ ರೂ.

◼️ಮಂಗಳೂರು ತಾಲೂಕಿನ ಮಳವೂರು ಮತ್ತು 10 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ 5 ವರ್ಷಗಳ ನಿರ್ವಹಣೆಗೆ (O&M) 11.40 ಕೋಟಿ ರೂ.

◼️ಮಂಗಳೂರು ನೂತನ ಕೇಂದ್ರ ಕಾರಾಗೃಹದ ಮುಖ್ಯ ಗೋಡೆ (Boundary Wall) ನಿರ್ಮಾಣಕ್ಕೆ 10 ಕೋಟಿ ರೂ.

◼️ಮಂಗಳೂರಿನ ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಮೊದಲ ಹಂತವಾಗಿ 200 ಹಾಸಿಗೆಗಳ ಸಾಮರ್ಥ್ಯ ಹೆಚ್ಚಳ, ಅಗತ್ಯ ಸಿಬ್ಬಂದಿ ಹಾಗೂ ಉಪಕರಣಗಳ ಪೂರೈಕೆಗೆ ಒಪ್ಪಿಗೆ.

◼️ಮಂಗಳೂರು ಮೀನುಗಾರಿಕಾ ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆಯನ್ನು 60 ರಿಂದ 200 ಕ್ಕೆ ಹೆಚ್ಚಿಸಿ 'ಮೀನುಗಾರಿಕಾ ವಿಶ್ವವಿದ್ಯಾಲಯ'ವಾಗಿ ಉನ್ನತೀಕರಿಸಲು ಹಾಗೂ 'Karnataka Institute of Marine Biotechnology and Blue Economy' ಸ್ಥಾಪನೆಗೆ ತಾತ್ವಿಕ ಅನುಮೋದನೆ.

◼️ಗುರುಪುರ-ನೇತ್ರಾವತಿ ನದಿಗಳಲ್ಲಿ PPP ಮಾದರಿಯಲ್ಲಿ 'ಮಂಗಳೂರು ಜಲ ಮೆಟ್ರೋ' ಯೋಜನೆ ಜಾರಿಗೆ ತಾಂತ್ರಿಕ-ಆರ್ಥಿಕ ಪರಿಶೀಲನೆಗೆ ತಾತ್ವಿಕ ಅನುಮೋದನೆ.

◼️ಮಂಗಳೂರು ತಾಲೂಕು ಸುರತ್ಕಲ್ ಹೋಬಳಿ ಬಡಗ ಎಕ್ಕಾರು ಗ್ರಾಮದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಹಾಗೂ ಕಲ್ಯಾಣ ಮಂಟಪ ನಿರ್ಮಾಣಕ್ಕಾಗಿ ತಿರುಪತಿ ತಿರುಮಲ ದೇವಸ್ಥಾನಂಗೆ 10 ಎಕರೆ ಜಮೀನು ಮಂಜೂರು.

◼️ಪಿಲಿಕುಳ ನಿಸರ್ಗಧಾಮದ 339.90½ ಎಕರೆ ಭೂಮಿಯನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಮಂಜೂರು. ಮಂಗಳೂರಿನ ಕರಾವಳಿ ಲೇಖಕಿಯರ ವಾಚಕಿಯರ ಸಂಘಕ್ಕೆ 0.05 ಎಕರೆ ಭೂಮಿ ಮಂಜೂರು.