ಬೆಂಗಳೂರು : ಪೊಲೀಸ್ ಠಾಣೆಗಳಲ್ಲಿನ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ಹೈಕೋರ್ಟ್ ಅತ್ಯಂತ ಮಹತ್ವದ ಹಾಗೂ ಕಟ್ಟುನಿಟ್ಟಿನ ತೀರ್ಪು ನೀಡಿದೆ. ರಾಜ್ಯದ ಯಾವುದೇ ಪೊಲೀಸ್ ಠಾಣೆಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳು ಯಾವುದೇ ಕಾರಣಕ್ಕೂ ಕೇವಲ ಒಂದು ನಿಮಿಷವೂ ಬಂದ್ ಆಗುವಂತಿಲ್ಲ ಎಂದು ನ್ಯಾಯಾಲಯವು ಗೃಹ ಇಲಾಖೆ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಖಡಕ್ ನಿರ್ದೇಶನ ನೀಡಿದೆ.
ಬೆಂಗಳೂರಿನ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಸುಮಾರು ಹನ್ನೊಂದು ತಿಂಗಳುಗಳ ಕಾಲ ಯುಪಿಎಸ್ ಇಲ್ಲದ ನೆಪವೊಡ್ಡಿ ಸಂತ್ರಸ್ತ ಮಹಿಳೆಯೊಬ್ಬರಿಗೆ ಸಿಸಿಟಿವಿ ದೃಶ್ಯಾವಳಿ ನೀಡಲು ನಿರಾಕರಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠವು ಈ ಆದೇಶ ಹೊರಡಿಸಿದೆ.
ವಿದ್ಯುತ್ ಕೈಕೊಟ್ಟಾಗ ಸಿಸಿಟಿವಿಗಳು ಆಫ್ ಆದರೆ, ಠಾಣೆಗಳಲ್ಲಿ ಕ್ಯಾಮೆರಾ ಅಳವಡಿಸುವ ಮೂಲ ಆಶಯವೇ ಧೂಳೀಪಟವಾಗುತ್ತದೆ ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಇಂತಹ ಬೇಜವಾಬ್ದಾರಿತನಕ್ಕೆ ಕಡಿವಾಣ ಹಾಕಲು ರಾಜ್ಯದ ಎಲ್ಲಾ ಠಾಣೆಗಳ ಕ್ಯಾಮೆರಾಗಳು, ಯುಪಿಎಸ್ ಬ್ಯಾಟರಿಗಳು ಹಾಗೂ ರೆಕಾರ್ಡಿಂಗ್ ಯಂತ್ರಗಳ ಸದ್ಯದ ಸ್ಥಿತಿಯನ್ನು ನೈಜ ಸಮಯದಲ್ಲಿ ಪತ್ತೆಹಚ್ಚುವ ಸುಧಾರಿತ ‘ಕೇಂದ್ರಿಕೃತ ಡ್ಯಾಶ್‌ಬೋರ್ಡ್’ ವ್ಯವಸ್ಥೆಯನ್ನು ರೂಪಿಸಲು ಸೂಚಿಸಿದೆ.
ಒಂದು ವೇಳೆ ಎಲ್ಲಾದರೂ ತಾಂತ್ರಿಕ ದೋಷ ಕಾಣಿಸಿಕೊಂಡರೆ ತಕ್ಷಣವೇ ಹಿರಿಯ ಅಧಿಕಾರಿಗಳಿಗೆ ಸ್ವಯಂಚಾಲಿತ ಎಚ್ಚರಿಕೆ ಸಂದೇಶ ರವಾನೆಯಾಗುವ ಡಿಜಿಟಲ್ ತಂತ್ರಜ್ಞಾನ ಅಳವಡಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಠಾಣೆಯಲ್ಲಿ ತಮಗೆ ಕಿರುಕುಳ ನೀಡಲಾಗಿತ್ತು ಎಂದು ಆರೋಪಿಸಿದ್ದ ಅರ್ಜಿದಾರ ಶೈಲಜಾ ಅವರಿಗೆ ದೃಶ್ಯಾವಳಿ ಸಿಗದಿದ್ದಾಗ, ಅವರು ಮಾಹಿತಿ ಆಯೋಗದ ಮೆಟ್ಟಿಲೇರಿದ್ದರು; ಆದರೆ ಅಲ್ಲಿಯೂ ನ್ಯಾಯ ಸಿಗದ ಕಾರಣ ಹೈಕೋರ್ಟ್ ಮೊರೆ ಹೋಗಿದ್ದರು.
ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಇಲಾಖೆಯ ಕಂಪ್ಯೂಟರ್ ವಿಭಾಗವು ಡಿಜಿಟಲ್ ಬ್ಯಾಕಪ್ ಹಾಗೂ ಕ್ಲೌಡ್ ತಂತ್ರಜ್ಞಾನದ ಮೂಲಕ ಸಿಸಿಟಿವಿ ದೃಶ್ಯಗಳನ್ನು ನಿರಂತರ 24 ಗಂಟೆಯೂ ಸಂರಕ್ಷಿಸಲು ಪ್ರತ್ಯೇಕ ನಿಯಮಾವಳಿ ರೂಪಿಸುವುದು ಕಡ್ಡಾಯವಾಗಿದೆ. ಈ ತೀರ್ಪು ಸಾರ್ವಜನಿಕರ ಹಕ್ಕುಗಳ ರಕ್ಷಣೆಗೆ ದೊಡ್ಡ ಬಲ ತುಂಬಿದೆ.