ಬೆಂಗಳೂರು: ಬೆಂಗಳೂರಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ವಿಜಯದಶಮಿ ಹಬ್ಬದ ಪ್ರಯುಕ್ತ ನಡೆಸಲುದ್ದೇಶಿಸಿರುವ ಪಥಸಂಚಲನಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ನಿಯಮ ಪಾಲನೆಯ ಕುರಿತು ಮಹತ್ವದ ಸಂದೇಶವನ್ನು ನೀಡಿದ್ದಾರೆ.
ಆರ್ಎಸ್ಎಸ್ನ ಪದಾಧಿಕಾರಿಗಳು ಪೊಲೀಸ್ ಇಲಾಖೆಗೆ ನೀಡಿರುವ ಎರಡು ಮಾಹಿತಿ ಪತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಅವರು ಸರ್ಕಾರದ ನಿಲುವನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಪೋಸ್ಟ್ ಪ್ರಕಾರ, ಯಾವುದೇ ಸಂಘಟನೆಯು ಕೇವಲ ಇಲಾಖೆಗೆ ಮಾಹಿತಿ ನೀಡುವುದು ಅಥವಾ ಅಗತ್ಯ ವ್ಯವಸ್ಥೆಗಳಿಗಾಗಿ ಸಹಕರಿಸಲು ಕೋರಿ ಪತ್ರ ಬರೆಯುವುದರಿಂದ ಮಾತ್ರವೇ ಕಾನೂನಾತ್ಮಕವಾಗಿ ಅಧಿಕೃತ ಅನುಮತಿ ಸಿಕ್ಕಂತಾಗುವುದಿಲ್ಲ.
ಪ್ರತಿಯೊಂದು ಸಂಸ್ಥೆಗೂ ಅನ್ವಯವಾಗುವಂತೆ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಬೇಕು ಮತ್ತು ಅಲ್ಲಿಂದ ಲಿಖಿತ ಅನುಮೋದನೆ ಬರುವವರೆಗೆ ಕಾಯುವುದು ಕಡ್ಡಾಯ ಎಂದು ಅವರು ನೆನಪಿಸಿದ್ದಾರೆ. ನಿಯಮಗಳು ಮತ್ತು ಕಾನೂನು ಪ್ರಕ್ರಿಯೆಗಳು ಎಲ್ಲರಿಗೂ ಒಂದೇ ಆಗಿರುತ್ತವೆ ಎಂಬುದನ್ನು ಅವರು ಒತ್ತಿಹೇಳಿದ್ದಾರೆ.
ಆರ್ಎಸ್ಎಸ್ನ ವಾರ್ಷಿಕ ವರದಿಯನ್ನೇ ಉಲ್ಲೇಖಿಸಿ ಮಾತನಾಡಿರುವ ಅವರು, ರಾಜ್ಯದಾದ್ಯಂತ ಲಕ್ಷಾಂತರ ಗಣವೇಷಧಾರಿಗಳು ಒಂದೇ ದಿನ ಹಾಗೂ ಒಂದೇ ಸಮಯದಲ್ಲಿ ರಸ್ತೆಗಿಳಿದು ಪಥಸಂಚಲನ ನಡೆಸುವಾಗ ಸಾರ್ವಜನಿಕ ವ್ಯವಸ್ಥೆಗೆ ದೊಡ್ಡ ಜವಾಬ್ದಾರಿ ಎದುರಾಗುತ್ತದೆ ಎಂದಿದ್ದಾರೆ.
ಇಂತಹ ಬೃಹತ್ ಕಾರ್ಯಕ್ರಮಗಳಿಗೆ ಸೂಕ್ತ ಭದ್ರತೆ, ಸಂಚಾರ ನಿರ್ವಹಣೆ, ಸಾರಿಗೆ, ಆಹಾರ ಮತ್ತು ಸಿಬ್ಬಂದಿ ನಿಯೋಜನೆಗಾಗಿ ಪೊಲೀಸ್ ಇಲಾಖೆಯು ಮುಂಚಿತವಾಗಿಯೇ ದೊಡ್ಡ ಮಟ್ಟದ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ಎಲ್ಲ ಸಾರ್ವಜನಿಕ ಸಂಪನ್ಮೂಲಗಳ ವ್ಯವಸ್ಥಿತ ಯೋಜನೆಗಾಗಿ ಮುಂಚಿತವಾಗಿ ಅಧಿಕೃತ ಅನುಮತಿ ಪಡೆಯುವುದು ಅತ್ಯಂತ ಅಗತ್ಯವಾಗಿದೆ ಎಂದು ಅವರು ವಿವರಿಸಿದ್ದಾರೆ.