Kannada News Next

karnataka

ಸಿನಿಪ್ರಿಯರಿಗೆ ಸರ್ಕಾರದಿಂದ ಬಿಗ್​ಶಾಕ್​ : ಸೆ.30ರಿಂದ ಟಿಕೆಟ್​ ದರ ಇನ್ನಷ್ಟು ಏರಿಕೆ

ಸರ್ಕಾರದ ಈ ನಿರ್ಧಾರದಿಂದಾಗಿ ಮುಂದಿನ ದಿನಗಳಲ್ಲಿ ಸಾಮಾನ್ಯ ಚಿತ್ರಮಂದಿರಗಳು ಹಾಗೂ ಐಷಾರಾಮಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ಬೆಲೆಗಳು ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆಯಿದೆ.

By ರಶ್ಮಿ ಎಸ್. | Rashmi S
september 30 karnataka cinema ticket price hike

ಚಿತ್ರಮಂದಿರಗಳಿಗೆ ತೆರಳಿ ಸಿನಿಮಾ ವೀಕ್ಷಿಸುವ ಕಲಾಭಿಮಾನಿಗಳಿಗೆ ರಾಜ್ಯ ಸರ್ಕಾರವು ಆರ್ಥಿಕ ಹೊರೆಯನ್ನು ಹೊರಿಸಲು ಮುಂದಾಗಿದೆ. ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ಕಾಯ್ದೆ-2024ರ ಅಡಿಯಲ್ಲಿ ಸೆಪ್ಟೆಂಬರ್ 30ರಿಂದ ಅನ್ವಯವಾಗುವಂತೆ ರಾಜ್ಯಾದ್ಯಂತ ಪ್ರದರ್ಶನಗೊಳ್ಳುವ ಚಲನಚಿತ್ರಗಳ ಟಿಕೆಟ್ ದರದ ಮೇಲೆ ಶೇಕಡಾ ಎರಡರಷ್ಟು ಹೆಚ್ಚುವರಿ ಸೆಸ್ ವಿಧಿಸಲು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ಮುಂದಿನ ದಿನಗಳಲ್ಲಿ ಸಾಮಾನ್ಯ ಚಿತ್ರಮಂದಿರಗಳು ಹಾಗೂ ಐಷಾರಾಮಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ಬೆಲೆಗಳು ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆಯಿದೆ.

ಈ ಹಿಂದೆ ಸರ್ಕಾರವು ಯಾವುದೇ ಅಧಿಕೃತ ಅಧಿಸೂಚನೆ ಇಲ್ಲದೆ ಕೇವಲ ಸುತ್ತೋಲೆಯ ಮೂಲಕ ಈ ಸೆಸ್ ಸಂಗ್ರಹಿಸಲು ಆದೇಶ ಹೊರಡಿಸಿತ್ತು. ಇದನ್ನು ವಿರೋಧಿಸಿ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ನ್ಯಾಯಾಲಯದ ಮೆಟ್ಟಿಲೇರಿದಾಗ ಸರ್ಕಾರ ತನ್ನ ಆದೇಶವನ್ನು ಹಿಂಪಡೆದಿತ್ತು. ಆದರೆ, ಈಗ ಕಾನೂನಾತ್ಮಕವಾಗಿ ಕಾಯ್ದೆಯ ಅಡಿಯಲ್ಲಿಯೇ ಆದೇಶ ಹೊರಡಿಸಿರುವುದರಿಂದ ಚಿತ್ರಮಂದಿರಗಳ ಮಾಲೀಕರು ಅನಿವಾರ್ಯವಾಗಿ ಸೆಸ್ ಸಂಗ್ರಹಿಸಬೇಕಾಗಿದೆ. ಈ ನಿಯಮದ ಪ್ರಕಾರ ಪ್ರಸ್ತುತ ಇರುವ ಟಿಕೆಟ್ ದರದ ಮೇಲೆ ಹೆಚ್ಚುವರಿ ಮೊತ್ತ ಬೀಳಲಿದ್ದು, ಉದಾಹರಣೆಗೆ 250 ರೂಪಾಯಿಗಳ ಟಿಕೆಟ್‌ಗೆ ಗ್ರಾಹಕರು ಹೆಚ್ಚುವರಿಯಾಗಿ 5 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

ಹೀಗೆ ಸಂಗ್ರಹವಾಗುವ ಹಣವನ್ನು ಸ್ಯಾಂಡಲ್‌ವುಡ್ ಚಿತ್ರರಂಗದ ಕಾರ್ಮಿಕರು, ತಂತ್ರಜ್ಞರು ಮತ್ತು ಸಾಂಸ್ಕೃತಿಕ ಕಲಾವಿದರ ಸಾಮಾಜಿಕ ಭದ್ರತೆ ಹಾಗೂ ಆರ್ಥಿಕ ನೆರವಿಗಾಗಿ ಪ್ರತ್ಯೇಕ ಕ್ಷೇಮಾಭಿವೃದ್ಧಿ ನಿಧಿಗೆ ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಈ ಆರ್ಥಿಕ ಹೊರೆಯನ್ನು ಚಿತ್ರಮಂದಿರಗಳ ಮಾಲೀಕರೇ ಭರಿಸಬೇಕೇ ಅಥವಾ ಸಂಪೂರ್ಣವಾಗಿ ಗ್ರಾಹಕರ ಮೇಲೆ ಜರಿಸಬೇಕೇ ಎಂಬ ಗೊಂದಲ ಹಾಗೂ ಚರ್ಚೆಗಳು ಸದ್ಯ ಉದ್ಯಮ ವಲಯದಲ್ಲಿ ಆರಂಭವಾಗಿವೆ.