Kannada News Next

karnataka

ಹಬ್ಬದ ಸೀಸನ್‌ನಲ್ಲಿ ಪ್ರಯಾಣಿಕರಿಗೆ ನೈಋತ್ಯ ರೈಲ್ವೆ ಸಿಹಿಸುದ್ದಿ..!

ಈ ಹಬ್ಬದ ವಿಶೇಷ ರೈಲುಗಳು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಅವಧಿಯಲ್ಲಿ ಕೇವಲ ವಾರಾಂತ್ಯದ ದಿನಗಳಾದ ಶನಿವಾರ ಮತ್ತು ಭಾನುವಾರಗಳಂದು ಮಾತ್ರ ಸಂಚರಿಸಲಿವೆ.

By ರಶ್ಮಿ ಎಸ್. | Rashmi S
south western railway festival special trains list

ಗೌರಿ-ಗಣೇಶ ಹಾಗೂ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಸ್ವಂತ ಊರುಗಳಿಗೆ ಪ್ರಯಾಣಿಸುವ ಸಾರ್ವಜನಿಕರಿಗೆ ನೈಋತ್ಯ ರೈಲ್ವೆ ವಲಯವು ಭರ್ಜರಿ ಸಿಹಿಸುದ್ದಿ ನೀಡಿದೆ. ಚೌತಿ ಮತ್ತು ದಸರಾ ಹಬ್ಬದ ಸಂದರ್ಭದಲ್ಲಿ ಉಂಟಾಗುವ ಸಾರ್ವಜನಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ, ಉತ್ತರ ಕರ್ನಾಟಕ ಮತ್ತು ಮಲೆನಾಡನ್ನು ಸಂಪರ್ಕಿಸುವ ಎಸ್‌ಎಸ್‌ಎಸ್ ಹುಬ್ಬಳ್ಳಿ ಹಾಗೂ ಚಿಕ್ಕಮಗಳೂರು ಜಂಕ್ಷನ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಕಾರ್ಯಾಚರಣೆಯನ್ನು ಘೋಷಿಸಲಾಗಿದೆ.

ಈ ಹಬ್ಬದ ವಿಶೇಷ ರೈಲುಗಳು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಅವಧಿಯಲ್ಲಿ ಕೇವಲ ವಾರಾಂತ್ಯದ ದಿನಗಳಾದ ಶನಿವಾರ ಮತ್ತು ಭಾನುವಾರಗಳಂದು ಮಾತ್ರ ಸಂಚರಿಸಲಿವೆ. ಮೊದಲ ಹಂತವಾಗಿ ಸೆಪ್ಟೆಂಬರ್ 5 ರಿಂದ ಸೆಪ್ಟೆಂಬರ್ 27 ರವರೆಗೆ ಒಟ್ಟು 8 ಟ್ರಿಪ್‌ಗಳು ಹಾಗೂ ಎರಡನೇ ಹಂತವಾಗಿ ಅಕ್ಟೋಬರ್ 3 ರಿಂದ ಅಕ್ಟೋಬರ್ 31 ರವರೆಗೆ ಒಟ್ಟು 9 ಟ್ರಿಪ್‌ಗಳು ಸೇರಿದಂತೆ ಒಟ್ಟು 17 ಟ್ರಿಪ್‌ಗಳ ಸೇವೆಯನ್ನು ಪ್ರಯಾಣಿಕರು ಪಡೆದುಕೊಳ್ಳಬಹುದಾಗಿದೆ.

ರೈಲು ಸಂಖ್ಯೆ 07341 - ಹುಬ್ಬಳ್ಳಿ-ಚಿಕ್ಕಮಗಳೂರು: ಈ ರೈಲು ಹುಬ್ಬಳ್ಳಿ ನಿಲ್ದಾಣದಿಂದ ಮುಂಜಾನೆ 05:00 ಗಂಟೆಗೆ ಹೊರಟು, ಅದೇ ದಿನ ಬೆಳಗ್ಗೆ 11:15 ಕ್ಕೆ ಚಿಕ್ಕಮಗಳೂರು ತಲುಪಲಿದೆ.

ರೈಲು ಸಂಖ್ಯೆ 07342 - ಚಿಕ್ಕಮಗಳೂರು-ಹುಬ್ಬಳ್ಳಿ: ಮರಳಿ ಪ್ರಯಾಣಿಸುವ ರೈಲು ಚಿಕ್ಕಮಗಳೂರಿನಿಂದ ಸಂಜೆ 05:30 ಕ್ಕೆ ಜರ್ನಿ ಆರಂಭಿಸಿ, ರಾತ್ರಿ 23:20 ಕ್ಕೆ ಹುಬ್ಬಳ್ಳಿ ಜಂಕ್ಷನ್ ತಲುಪಲಿದೆ.

ಈ ರೈಲುಗಳು ಮಾರ್ಗಮಧ್ಯೆ ಹಾವೇರಿ, ರಾಣೇಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು ಮತ್ತು ಕಡೂರು ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿವೆ. ಪ್ರಯಾಣಿಕರು ಐಆರ್‌ಸಿಟಿಸಿ (IRCTC) ಆಪ್ ಅಥವಾ ರೈಲ್ವೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮುಂಗಡ ಟಿಕೆಟ್ ಕಾಯ್ದಿರಿಸಬಹುದಾಗಿದ್ದು, ಹಬ್ಬದ ರಜೆಯ ಸುಗಮ ಪ್ರಯಾಣಕ್ಕೆ ರೈಲ್ವೆ ಇಲಾಖೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ.