ರಾಜಧಾನಿ ಜನತೆಗೆ ಶಾಕ್: ದುಬಾರಿಯಾಯ್ತು ಕಾಫಿ,ಟೀ ದರ!
ನಗರದ ಪ್ರಮುಖ ಹೋಟೆಲ್‌ಗಳು ಹಾಗೂ ರಸ್ತೆ ಬದಿಯ ಟೀ ಸ್ಟಾಲ್‌ಗಳಲ್ಲಿ ಕಾಫಿ-ಟೀ ಬೆಲೆಯನ್ನು ₹2 ರಿಂದ ₹3 ರವರೆಗೆ ಸದ್ದಿಲ್ಲದೆ ಏರಿಕೆ ಮಾಡಲಾಗಿದೆ.
ಸಿಲಿಕಾನ್ ಸಿಟಿಯ ಜನಸಾಮಾನ್ಯರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ. ಈಗಾಗಲೇ ತರಕಾರಿ, ಹಾಲಿನ ದರ ಹಾಗೂ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ರಾಜಧಾನಿ ಜನತೆಗೆ, ಇದೀಗ ದಿನದ ಆರಂಭಕ್ಕೆ ಶಕ್ತಿ ನೀಡುವ ಬಿಸಿ ಬಿಸಿ ಕಾಫಿ ಮತ್ತು ಚಹಾದ ದರವೂ ದಿಢೀರ್ ಹೆಚ್ಚಳವಾಗಿದೆ. ನಗರದ ಪ್ರಮುಖ ಹೋಟೆಲ್‌ಗಳು ಹಾಗೂ ರಸ್ತೆ ಬದಿಯ ಟೀ ಸ್ಟಾಲ್‌ಗಳಲ್ಲಿ ಕಾಫಿ-ಟೀ ಬೆಲೆಯನ್ನು ₹2 ರಿಂದ ₹3 ರವರೆಗೆ ಸದ್ದಿಲ್ಲದೆ ಏರಿಕೆ ಮಾಡಲಾಗಿದೆ.
ಈ ದಿಢೀರ್ ದರ ಹೆಚ್ಚಳಕ್ಕೆ ಮಾರುಕಟ್ಟೆಯಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೇರಿರುವುದು ಪ್ರಮುಖ ಕಾರಣವಾಗಿದೆ. ಕೇಂದ್ರ ಸರ್ಕಾರವು ಸಕ್ಕರೆ ರಫ್ತಿಗೆ ಮುಕ್ತ ಅವಕಾಶ ನೀಡಿರುವುದು ಹಾಗೂ ಪರಿಸರ ಸ್ನೇಹಿ ಇಂಧನವಾದ ಎಥೆನಾಲ್ ತಯಾರಿಕೆಗೆ ಶೇ. 20ರಷ್ಟು ಕಬ್ಬನ್ನು ಕಡ್ಡಾಯವಾಗಿ ಮೀಸಲಿಟ್ಟಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಕೊರತೆ ಎದುರಾಗಿದೆ. ಇದರ ಬೆನ್ನಲ್ಲೇ ಶ್ರಾವಣ ಮಾಸದ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಸಿಹಿತಿಂಡಿಗಳಿಗೆ ಬೇಡಿಕೆ ಹೆಚ್ಚಾಗಿ, ಚಿಲ್ಲರೆ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಕಿಲೋಗೆ ₹80 ರ ಗಡಿ ತಲುಪಿದೆ.
ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಪ್ರಕಾರ, ಕೇವಲ ಸಕ್ಕರೆ-ಬೆಲ್ಲ ಮಾತ್ರವಲ್ಲದೆ ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ, ಕಟ್ಟಡಗಳ ದುಬಾರಿ ಬಾಡಿಗೆ, ವಾಣಿಜ್ಯ ಬಳಕೆಯ ವಿದ್ಯುತ್ ದರ ಹಾಗೂ ನೀರಿನ ಬಿಲ್ ಗಣನೀಯವಾಗಿ ಹೆಚ್ಚಾಗಿದೆ. ಈ ಎಲ್ಲ ಹೆಚ್ಚುವರಿ ನಿರ್ವಹಣಾ ವೆಚ್ಚಗಳನ್ನು ಸರಿದೂಗಿಸಲು ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಮಾಲೀಕರು ಸಮರ್ಥಿಸಿಕೊಂಡಿದ್ದಾರೆ. ಇದರಿಂದಾಗಿ ಈ ಹಿಂದೆ ₹20 ಇದ್ದ ಕಾಫಿ ಬೆಲೆ ಈಗ ₹22 ರಿಂದ ₹23 ಕ್ಕೆ ಏರಿಕೆಯಾಗಿದ್ದರೆ, ಸಣ್ಣ ಟೀ ಅಂಗಡಿಗಳಲ್ಲಿ ₹15 ಇದ್ದ ಚಹಾ ₹17-18 ಕ್ಕೆ ತಲುಪಿದೆ.
ಒಟ್ಟಾರೆಯಾಗಿ, ದುಡಿಯುವ ವರ್ಗದ ಪ್ರಮುಖ ಆಸರೆಯಾಗಿದ್ದ ಹೋಟೆಲ್ ತಿಂಡಿ ಹಾಗೂ ಪಾನೀಯಗಳು ಈಗ ಮತ್ತಷ್ಟು ದುಬಾರಿಯಾಗಿದ್ದು, ಮಧ್ಯಮ ವರ್ಗದ ಗ್ರಾಹಕರ ಜೇಬಿಗೆ ದೊಡ್ಡ ಕತ್ತರಿ ಬಿದ್ದಂತಾಗಿದೆ.
Topics

