Kannada News Next

karnataka

ಕರಾವಳಿಯ ಜೀವನಾಡಿ 'ವೆನ್ಲಾಕ್' ಆಸ್ಪತ್ರೆಗೆ ಹೆಚ್ಚುವರಿ ಹಾಸಿಗೆ ಬಲ..!

ಕೇವಲ ವೈದ್ಯಕೀಯ ಉಪಕರಣ ಹಾಗೂ ಹಾಸಿಗೆಗಳನ್ನಷ್ಟೇ ನೀಡದೆ, ಈ ಹೊಸ ವಾರ್ಡ್‌ಗಳ ಸುಗಮ ಮತ್ತು ಪರಿಣಾಮಕಾರಿ ನಿರ್ವಹಣೆಗಾಗಿ ಸರ್ಕಾರವು 195 ಹೊಸ ಸಿಬ್ಬಂದಿ ಹುದ್ದೆಗಳ ಸೃಷ್ಟಿಗೂ ಚಾಲನೆ ನೀಡಿದೆ.

By ರಶ್ಮಿ ಎಸ್. | Rashmi S
venlock hospital extra beds mangalore

ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ ಮತ್ತು ಮಲೆನಾಡಿನ ನಾಲ್ಕಾರು ನೆರೆಯ ಜಿಲ್ಲೆಗಳ ಬಡ ರೋಗಿಗಳ ಜೀವನಾಡಿಯಾಗಿರುವ ಮಂಗಳೂರಿನ ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ಕೊನೆಗೂ ಮೂಲಸೌಕರ್ಯಗಳ ಬಲ ಸಿಕ್ಕಿದೆ. ಆಸ್ಪತ್ರೆಯನ್ನು ಸಮಗ್ರವಾಗಿ ಉನ್ನತೀಕರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮಹತ್ವದ ತೀರ್ಮಾನ ಕೈಗೊಂಡಿದ್ದು, ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆಗೆ ಅಧಿಕೃತ ಅನುಮೋದನೆ ನೀಡಲಾಗಿದೆ.

ಪ್ರಸ್ತುತ ವೆನ್ಲಾಕ್ ಆಸ್ಪತ್ರೆಯಲ್ಲಿ ಒಟ್ಟು 905 ಹಾಸಿಗೆಗಳ ಅಧಿಕೃತ ಸಾಮರ್ಥ್ಯವಿದ್ದರೂ, ರೋಗಿಗಳ ದಟ್ಟಣೆ ಹೆಚ್ಚಿರುವುದರಿಂದ ಸದ್ಯ 1088 ಹಾಸಿಗೆಗಳನ್ನು ಬಳಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಈ ತೀವ್ರ ಒತ್ತಡವನ್ನು ಕಡಿಮೆ ಮಾಡಲು ಮೊದಲ ಹಂತದಲ್ಲಿ 200 ಹೊಸ ಹಾಸಿಗೆಗಳನ್ನು ಮಂಜೂರು ಮಾಡಲಾಗಿದೆ. ಅತ್ಯಂತ ಪ್ರಮುಖವಾಗಿ, ಆಸ್ಪತ್ರೆಯಲ್ಲಿ ಪ್ರತಿದಿನ ಎದುರಾಗುತ್ತಿದ್ದ ತುರ್ತು ಚಿಕಿತ್ಸಾ ಹಾಸಿಗೆಗಳ ಕೊರತೆಯನ್ನು ನೀಗಿಸಲು ಈ ಹೊಸ ವ್ಯವಸ್ಥೆಯಲ್ಲಿ 50 ಅತ್ಯಾಧುನಿಕ ಐಸಿಯು ಹಾಸಿಗೆಗಳನ್ನು ಅಳವಡಿಸಲಾಗುತ್ತಿದೆ. ಇವುಗಳಲ್ಲಿ 30 ವೆಂಟಿಲೇಟರ್ ಸಹಿತ ಹಾಸಿಗೆಗಳು ಹಾಗೂ 20 ಸ್ಟೆಪ್ ಡೌನ್ ಹಾಸಿಗೆಗಳು ಒಳಗೊಂಡಿರುತ್ತವೆ. ಇವುಗಳ ಜೊತೆಗೆ 10 ತುರ್ತು ಚಿಕಿತ್ಸಾ ಬೆಡ್ ಹಾಗೂ 140 ಸಾಮಾನ್ಯ ವಾರ್ಡ್ ಹಾಸಿಗೆಗಳನ್ನು ಆಸ್ಪತ್ರೆಯ ನೂತನ ಒಪಿಡಿ ಕಟ್ಟಡದಲ್ಲಿ ಸಜ್ಜುಗೊಳಿಸಲಾಗುವುದು.

ಕೇವಲ ವೈದ್ಯಕೀಯ ಉಪಕರಣ ಹಾಗೂ ಹಾಸಿಗೆಗಳನ್ನಷ್ಟೇ ನೀಡದೆ, ಈ ಹೊಸ ವಾರ್ಡ್‌ಗಳ ಸುಗಮ ಮತ್ತು ಪರಿಣಾಮಕಾರಿ ನಿರ್ವಹಣೆಗಾಗಿ ಸರ್ಕಾರವು 195 ಹೊಸ ಸಿಬ್ಬಂದಿ ಹುದ್ದೆಗಳ ಸೃಷ್ಟಿಗೂ ಚಾಲನೆ ನೀಡಿದೆ. ಇದರಲ್ಲಿ 115 ನರ್ಸಿಂಗ್ ಸಿಬ್ಬಂದಿ ಹಾಗೂ ಅಗತ್ಯ ವೈದ್ಯರು ಮತ್ತು ಪೂರಕ ತಾಂತ್ರಿಕ ಸಿಬ್ಬಂದಿಗಳು ಇರಲಿದ್ದಾರೆ. ಸಾರ್ವಜನಿಕರ ದಶಕಗಳ ಬೇಡಿಕೆಯಾಗಿದ್ದ ವೆನ್ಲಾಕ್ ಆಸ್ಪತ್ರೆಯನ್ನು ಪ್ರಾದೇಶಿಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಸರ್ಕಾರದ ಈ ಮೊದಲ ಹಂತದ ಕ್ರಮವು ಕರಾವಳಿ ಭಾಗದ ಆರೋಗ್ಯ ಕ್ಷೇತ್ರಕ್ಕೆ ದಿಕ್ಸೂಚಿಯಾಗಲಿದೆ. ಮುಂದಿನ ದಿನಗಳಲ್ಲಿ ಆಸ್ಪತ್ರೆಯ ಒಟ್ಟು ಹಾಸಿಗೆಗಳ ಸಾಮರ್ಥ್ಯವನ್ನು 1400ರ ಗಡಿ ದಾಟಿಸುವ ಭರವಸೆಯನ್ನೂ ಸರ್ಕಾರ ನೀಡಿದೆ.