ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಆನ್‌ಲೈನ್ ಆಹಾರ ವಿತರಣಾ ಆ್ಯಪ್‌ಗಳ ಬಳಕೆ ಹೆಚ್ಚಾಗುತ್ತಿದ್ದು, ಅಷ್ಟೇ ವೇಗವಾಗಿ ಆಹಾರದ ನೈರ್ಮಲ್ಯದ ಲೋಪದೋಷಗಳೂ ಕೂಡ ಮುನ್ನೆಲೆಗೆ ಬರುತ್ತಿವೆ. ಇತ್ತೀಚೆಗೆ ನಗರದ ಪ್ರಿಯಮ್ ತಹಬಿಲ್ದಾರ್ ಎಂಬ ತಾಂತ್ರಿಕ ಉದ್ಯೋಗಿಯೊಬ್ಬರು ಜೊಮಾಟೊ ಮೂಲಕ ಆರ್ಡರ್ ಮಾಡಿದ್ದ ಪಾವ್ ಭಾಜಿ ಆಹಾರದ ಪ್ಯಾಕೆಟ್‌ನಲ್ಲಿ ಸೇದಿ ಬಿಸಾಡಿದ್ದ ಬೀಡಿಯ ತುಂಡು ಪತ್ತೆಯಾಗಿದ್ದು, ಇಡೀ ಆನ್‌ಲೈನ್ ಗ್ರಾಹಕ ವಲಯವನ್ನು ಬೆಚ್ಚಿಬೀಳಿಸಿದೆ.
ಗ್ರಾಹಕ ತನಗೆ ಬಂದ ಪಾರ್ಸೆಲ್ ಅನ್ನು ತೆರೆದಾಗ ಪಾವ್ ಭಾಜಿಯೊಂದಿಗೆ ನೀಡಲಾಗಿದ್ದ ಕತ್ತರಿಸಿದ ಈರುಳ್ಳಿ ಹಾಗೂ ಚಟ್ನಿಯ ಮಧ್ಯದಲ್ಲಿ ಸಂಪೂರ್ಣವಾಗಿ ಜಲಿದು ಮುಗಿಸಿದ್ದ ಬೀಡಿಯೊಂದು ಪತ್ತೆಯಾಗಿದೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ ಅವರು, ತಮ್ಮ ಲಿಂಕ್ಡ್‌ಇನ್ ಖಾತೆಯಲ್ಲಿ ಆಹಾರದ ಫೋಟೋ ಹಂಚಿಕೊಂಡು, ಜೊಮಾಟೊದಿಂದ ತಮಗೆ ಉಚಿತವಾಗಿ ಸ್ಮೋಕ್ ಫ್ಲೇವರ್ ಸಿಕ್ಕಿದೆ ಎಂದು ವ್ಯಂಗ್ಯವಾಗಿ ಪೋಸ್ಟ್ ಬರೆದಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಸಂಸ್ಥೆಯು ತನಿಖೆ ನಡೆಸುವುದಾಗಿ ಭರವಸೆ ನೀಡಿತ್ತು.
ಆದರೆ, ತನಿಖೆಯ ಬಳಿಕ ಗ್ರಾಹಕರ ಆರೋಗ್ಯದ ಸುರಕ್ಷತೆಯ ಲೋಪಕ್ಕೆ ಜೊಮಾಟೊ ನೀಡಿದ ಪರಿಹಾರ ನೆಟ್ಟಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕಂಪನಿಯು ಮುಂದಿನ ಆರ್ಡರ್‌ಗಾಗಿ ಕೇವಲ 100 ರೂಪಾಯಿಯ ರಿಯಾಯಿತಿ ಕೂಪನ್ ನೀಡಿ ಸುಮ್ಮನಾಗಿದೆ. ಹೋಟೆಲ್ ಸಿಬ್ಬಂದಿ ಆಹಾರ ಪ್ಯಾಕ್ ಮಾಡುವಾಗ ವಹಿಸಿರುವ ಇಂತಹ ಬೇಜವಾಬ್ದಾರಿತನಕ್ಕೆ ಕೇವಲ 100 ರೂಪಾಯಿ ನೀಡಿ ಕೈತೊಳೆದುಕೊಂಡಿರುವುದಕ್ಕೆ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್ ವ್ಯಕ್ತವಾಗುತ್ತಿದೆ. ಈ ಘಟನೆಯು ಆನ್‌ಲೈನ್ ಮೂಲಕ ತರಿಸುವ ಆಹಾರಗಳು ಎಷ್ಟು ಸುರಕ್ಷಿತ ಎಂಬ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದ್ದು, ಗ್ರಾಹಕರು ಹೊರಗಿನ ಆಹಾರ ಸೇವಿಸುವಾಗ ಮತ್ತಷ್ಟು ಜಾಗರೂಕರಾಗಿರಬೇಕಾದ ಅಗತ್ಯವನ್ನು ನೆನಪಿಸಿದೆ.