ಮಂಗಳೂರು : ಟೆಂಪೋ ಹಾಗೂ ಆಲ್ಟೋ ಕಾರು ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆ ಸಾವನ್ನಪ್ಪಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿಯ ಹಳೀರ ಫ್ಲೈಓವರ್ ಬಳಿಯಲ್ಲಿ ನಡೆದಿದೆ.
ಮೃತಪಟ್ಟ ಮಹಿಳೆಯನ್ನು ಮಡಿಕೇರಿಯ ನಫೀಸಾ ( 55 ವರ್ಷ) ಎಂದು ಗುರುತಿಸಲಾಗಿದೆ. ಆಲ್ಟೋ ಕಾರಿನಲ್ಲಿ ಒಟ್ಟು 5 ಮಂದಿ ಪ್ರಯಾಣಿಸುತ್ತಿದ್ದು, ಉಮ್ರಾ ತರಗತಿಯನ್ನು ಮುಗಿಸಿ ಮನೆಗೆ ವಾಪಾಸಾಗುತ್ತಿದ್ದ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಕಾರಿನಲ್ಲಿ ಚಾಲಕ ಸೇರಿದಂತೆ ಒಟ್ಟು ಐದು ಮಂದಿ ಪ್ರಯಾಣಿಸುತ್ತಿದ್ದು, ನಾಲ್ವರು ಮಹಿಳೆಯರಾಗಿದ್ದಾರೆ. ಈ ಪೈಕಿ ಓರ್ವ ಮಹಿಳೆ ಸಾವನ್ನಪ್ಪಿದ್ರೆ, ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಣಿಯಿಂದ ಪುತ್ತೂರು- ಮಡಿಕೇರಿ, ಮೈಸೂರಿಗೆ ಸಂಪರ್ಕ ಕಲ್ಪಿಸುವ ಹಳೀರ ಸರ್ವಿಸ್ ರಸ್ತೆಯ ಅವೈಜ್ಞಾನಿಕ ಕಾಮಗಾರಿಯಿಂದ ಈ ಭಾಗದಲ್ಲಿ ಅತೀ ಹೆಚ್ಚು ಅಪಘಾತಗಳು ಸಂಭವಿಸುತ್ತಿದೆ. ಸರ್ವೀಸ್ ರಸ್ತೆಯು ಸರಿಯಾಗಿ ಘೋಚರಿಸದೇ ಇರುವ ಕಾರಣದಿಂದಲೇ ವಾಹನ ಚಾಲಕರು ಗೊಂದಲಕ್ಕೆ ಒಳಗಾಗುತ್ತಿದ್ದಾರೆ.
ರಸ್ತೆ ಅತ್ಯಂತ ಕಿರಿದಾಗಿದ್ದು, ಪ್ರವೇಶ ರಸ್ತೆಯು ಸರಿಯಾಗಿ ಗೋಚರಿಸುತ್ತಿಲ್ಲ, ಅಲ್ಲದೇ ಯಾವುದೇ ಸೂಚನಾ ಫಲಕ ಕೂಡ ಇಲ್ಲದೇ ಇರುವುದರಿಂದ ಹಲವು ಗೊಂದಲಗಳಿಗೆ ಕಾರಣ ಎಂದು ಆರೋಪಿಸಲಾಗುತ್ತಿದೆ.