ಮಂಗಳೂರು : ಮಂಗಳೂರು ಸಮೀಪದ ಸುರತ್ಕಲ್ನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಅಪರೂಪದ ಹಾಗೂ ಸವಾಲಿನ ಘಟನೆಯೊಂದು ಜರುಗಿದೆ. ಹವ್ಯಾಸಿ ಯಕ್ಷಗಾನ ಕಲಾವಿದೆಯಾಗಿರುವ ದಿಶಾ ಶೆಟ್ಟಿ ಎಂಬುವವರು ತಮ್ಮ ಒಂಭತ್ತು ತಿಂಗಳ ತುಂಬು ಗರ್ಭಾವಸ್ಥೆಯಲ್ಲೂ ರಂಗದ ಮೇಲೆ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.
ಸುರತ್ಕಲ್ನ ಬಂಟರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಯಕ್ಷಸಿರಿ ಸಂಸ್ಥೆಯ ನಾಲ್ಕನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ, ಪ್ರಸಿದ್ಧ ಯಕ್ಷಗುರು ರಾಕೇಶ್ ರೈ ಅವರ ನಿರ್ದೇಶನದಲ್ಲಿ ದಶಾವತಾರ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಈ ಪ್ರಸಂಗದಲ್ಲಿ ದಿಶಾ ಶೆಟ್ಟಿ ಅವರು ಭಕ್ತ ಪ್ರಹ್ಲಾದನ ತಾಯಿಯಾದ ಕಯಾದು ಎಂಬ ವಿಶಿಷ್ಟ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ದಿಶಾ ಶೆಟ್ಟಿ ಅವರ ಈ ರಂಗಪ್ರದರ್ಶನದ ಫೋಟೋ ಹಾಗೂ ವಿಡಿಯೋಗಳು ಭಾರಿ ಪ್ರಮಾಣದಲ್ಲಿ ಸದ್ದು ಮಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಅವರ ಕಲಾ ಪ್ರೇಮಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. ಸುಮಾರು ಇಪ್ಪತ್ತು ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಪುಂಡು ವೇಷಗಳನ್ನು ಧರಿಸುತ್ತಾ ಸಕ್ರಿಯರಾಗಿರುವ ದಿಶಾ ಅವರಿಗೆ, ಈ ತಾಯ್ತನದ ಮಧುರ ಅವಧಿಯಲ್ಲಿ ಕಯಾದು ಪಾತ್ರವನ್ನು ನಿರ್ವಹಿಸಿದ್ದು ಭಾವನಾತ್ಮಕವಾಗಿ ಅತ್ಯಂತ ಅಪರೂಪದ ಅನುಭವ ನೀಡಿದೆ.
ಮೂಲತಃ ಯಕ್ಷಗಾನದ ಹಿನ್ನೆಲೆಯಿರುವ ಕುಟುಂಬದಿಂದಲೇ ಬಂದಿರುವ ಇವರಿಗೆ ಅವರ ತಾಯಿ ಹಾಗೂ ಚಿಕ್ಕಮ್ಮನೇ ಈ ಸಾಹಸಕ್ಕೆ ಮುಖ್ಯ ಪ್ರೇರಣೆಯಾಗಿದ್ದಾರೆ. ಏಕೆಂದರೆ ಅವರೂ ಸಹ ಗರ್ಭಿಣಿಯಾಗಿದ್ದ ಕಾಲದಲ್ಲೇ ರಂಗದ ಮೇಲೆ ವೇಷ ಧರಿಸಿ ನಟಿಸಿದ್ದರು. ಕುಟುಂಬದವರ ಬೆಂಬಲ ಹಾಗೂ ಗುರುಗಳ ಪ್ರೋತ್ಸಾಹದಿಂದಾಗಿ ಈ ಸವಾಲನ್ನು ಸ್ವೀಕರಿಸಲು ತಮಗೆ ಸಾಧ್ಯವಾಯಿತು ಎಂದು ಅವರು ತಿಳಿಸಿದ್ದಾರೆ.
ಆದರೆ, ಈ ಯಶಸ್ಸಿನ ಬೆನ್ನಲ್ಲೇ ಕಲಾವಿದೆ ದಿಶಾ ಶೆಟ್ಟಿ ಅವರು ಸಮಾಜದ ಇತರ ಮಹಿಳೆಯರಿಗೆ ಒಂದು ಅತ್ಯಂತ ಜವಾಬ್ದಾರಿಯುತ ಸಂದೇಶವನ್ನು ರವಾನಿಸಿದ್ದಾರೆ. ಪ್ರತಿಯೊಬ್ಬ ಮಹಿಳೆಯ ಶಾರೀರಿಕ ಸ್ಥಿತಿ ಹಾಗೂ ಗರ್ಭಾವಸ್ಥೆಯ ದಿನಗಳು ವಿಭಿನ್ನವಾಗಿರುತ್ತವೆ ಮತ್ತು ಇದು ದೈಹಿಕವಾಗಿ ಅತ್ಯಂತ ಸೂಕ್ಷ್ಮವಾದ ಸಮಯವಾಗಿರುತ್ತದೆ.
ತಾವು ಮೊದಲಿನಿಂದಲೂ ದೈಹಿಕವಾಗಿ ತುಂಬಾ ಸಕ್ರಿಯ ಆಗಿದ್ದ ಕಾರಣ ವೈದ್ಯಕೀಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಕೇವಲ ಸಾಮಾಜಿಕ ಜಾಲತಾಣಗಳ ವಿಡಿಯೋ ನೋಡಿ ಪ್ರೇರಿತರಾಗಿ ಇತರ ಗರ್ಭಿಣಿಯರು ತಮ್ಮ ಆರೋಗ್ಯವನ್ನು ಪಣಕ್ಕಿಟ್ಟು ಇಂತಹ ಸಾಹಸಗಳನ್ನು ಅನುಕರಿಸಲು ಪ್ರಯತ್ನಿಸಬಾರದು ಎಂದು ಅವರು ಕಳಕಳಿಯಿಂದ ವಿನಂತಿಸಿಕೊಂಡಿದ್ದಾರೆ.