Kannada News Next

mangaluru

ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತಾ ತಪಾಸಣೆ: ಸಚಿವ ಯು.ಟಿ.ಖಾದರ್‌ ವಾರ್ನಿಂಗ್

ಪ್ರತಿಯೊಬ್ಬರ ಆರೋಗ್ಯ ಅವರವರ ಕೈಯಲ್ಲಿದೆ, ನನ್ನ ಕೈಯಲ್ಲಿ ಇಲ್ಲ ಎಂದು ಹೇಳಿರುವ ಅವರು, ಆಹಾರ ಶುದ್ಧತೆಯ ಕುರಿತು ದೊಡ್ಡ ಮಟ್ಟದ ಜಾಗೃತಿಗೆ ಕರೆ ನೀಡಿದ್ದಾರೆ.

By Meghana Pranuth | ಮೇಘನಾ ಪ್ರಣೂತ್‌
UT KHADER

ಮಂಗಳೂರು : ಆಹಾರ ಸುರಕ್ಷತೆ ಮತ್ತು ಸಾರ್ವಜನಿಕರ ಆರೋಗ್ಯದ ವಿಚಾರದಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ನೀಡಿರುವ ಹೇಳಿಕೆ ಈಗ ತೀವ್ರ ಸಂಚಲನ ಮೂಡಿಸಿದೆ. ಪ್ರತಿಯೊಬ್ಬರ ಆರೋಗ್ಯ ಅವರವರ ಕೈಯಲ್ಲಿದೆ, ನನ್ನ ಕೈಯಲ್ಲಿ ಇಲ್ಲ ಎಂದು ಹೇಳಿರುವ ಅವರು, ಆಹಾರ ಶುದ್ಧತೆಯ ಕುರಿತು ದೊಡ್ಡ ಮಟ್ಟದ ಜಾಗೃತಿಗೆ ಕರೆ ನೀಡಿದ್ದಾರೆ.

ರೋಗ ಬಂದರೆ ಮದ್ದು ನೀಡಲು ಮಾತ್ರ ನನ್ನ ಇಲಾಖೆ ಇದೆ. ನಾವು ತಿನ್ನುವ ಆಹಾರ, ನಮ್ಮ ಜೀವನಶೈಲಿ ಮತ್ತು ಪರಿಸರದ ಮೇಲೆ ಪ್ರತಿಯೊಬ್ಬರ ಆರೋಗ್ಯ ಅವಲಂಬಿತವಾಗಿರುತ್ತದೆ" ಪ್ರತಿಯೊಂದು ಹೋಟೆಲ್‌ನಲ್ಲಿಯೂ ನೈರ್ಮಲ್ಯ ಹಾಗೂ ಪರಿಶುದ್ಧತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದಿದ್ದಾರೆ.

ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತೆಯನ್ನು ಖಾತರಿಪಡಿಸಲು ಮೇಲ್ಮಟ್ಟದಿಂದಲೇ ತಪಾಸಣೆ ಆರಂಭಿಸಲಾಗುವುದು ಎಂದಿರುವ ಅವರು, "ಬೆಂಗಳೂರಿನ ಎಲ್ಲಾ ಪಂಚತಾರಾ ಹೋಟೆಲ್‌ಗಳಿಗೆ ಈಗಾಗಲೇ ನಮ್ಮ ತಂಡ ಭೇಟಿ ನೀಡಿ ತಪಾಸಣೆ ನಡೆಸಿದೆ. ಬೃಹತ್ ಪಂಚತಾರಾ ಹೋಟೆಲ್‌ಗಳ ಮೇಲೆಯೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ, ಕೆಳಹಂತದ ಹಾಗೂ ಸಣ್ಣಪುಟ್ಟ ಹೋಟೆಲ್‌ಗಳು ತಾನಾಗಿಯೇ ಅಲರ್ಟ್ ಆಗುತ್ತವೆ" ಎಂದು ಕಾರ್ಯಾಚರಣೆಯ ತಂತ್ರವನ್ನು ವಿವರಿಸಿದ್ದಾರೆ.

ಸಣ್ಣಪುಟ್ಟ ಅಂಗಡಿಗಳಿಗೆ ಹೋದರೆ ದೊಡ್ಡ ಮಟ್ಟದ ಬದಲಾವಣೆ ಸಾಧ್ಯವಿಲ್ಲ. ಇದೇ ವೇಳೆ ಕೆಎಫ್‌ಸಿ, ಮೆಕ್‌ಡೊನಾಲ್ಡ್ಸ್‌ನಂತಹ ಜಾಗತಿಕ ಫಾಸ್ಟ್ ಫುಡ್ ನೆಟ್‌ವರ್ಕ್‌ಗಳ ಕುರಿತೂ ಅವರು ಗಂಭೀರ ಪ್ರಶ್ನೆ ಎತ್ತಿದ್ದಾರೆ. "ಫಾಸ್ಟ್ ಫುಡ್ ಸೆಂಟರ್‌ಗಳಲ್ಲಿ ಬಳಸುವ ಬಣ್ಣ ಎಷ್ಟು ಹಳೆಯದು? ಕೆಮಿಕಲ್ ಇದೆಯಾ? ಪ್ರೋಸಸ್ಡ್ ಚಿಕನ್ ಎಲ್ಲಿಂದ ಬರುತ್ತದೆ ಮತ್ತು ಅದನ್ನು ಎಷ್ಟು ದಿನ ಸಂಗ್ರಹಿಸಿ ಇಡಲಾಗುತ್ತದೆ? ಎಂಬ ಸಂಪೂರ್ಣ ವಿವರಗಳನ್ನು ಜನರಿಗೆ ಸ್ಪಷ್ಟವಾಗಿ ತಿಳಿಸಬೇಕಿದೆ" ಎಂದಿದ್ದಾರೆ.

ಜನರಿಗೆ ಶುದ್ಧ ಮತ್ತು ಸುರಕ್ಷಿತ ಆಹಾರ ದೊರೆಯುವಂತೆ ಮಾಡುವುದು ಹಾಗೂ ಆಹಾರದ ಸತ್ಯಾಸತ್ಯತೆಯನ್ನು ಅವರ ಮುಂದೆ ಇಡುವುದು ಸರ್ಕಾರದ ಜವಾಬ್ದಾರಿ. ಇದೆಲ್ಲವನ್ನೂ ತಿಳಿದ ನಂತರವೂ ಜನ ಅದೇ ಆಹಾರವನ್ನು ತಿನ್ನುತ್ತೇವೆ ಎಂದರೆ ಅದಕ್ಕೆ ನಾವೇನೂ ಮಾಡಲು ಸಾಧ್ಯವಿಲ್ಲ ಎಂದು ಯು.ಟಿ. ಖಾದರ್ ಹೇಳಿದ್ದಾರೆ.‌