ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ಆಯೋಜನೆಗೊಂಡಿರುವ ಮಹತ್ವದ ಸಚಿವ ಸಂಪುಟ ಸಭೆಯು ಕರಾವಳಿ ಭಾಗದ ಜನರಲ್ಲಿ ಹೊಸ ನಿರೀಕ್ಷೆಗಳನ್ನು ಮೂಡಿಸಿದೆ. ಕರಾವಳಿ ಜಿಲ್ಲೆಗಳ ವಿಶಿಷ್ಟ ಭೌಗೋಳಿಕತೆ ಮತ್ತು ಕೃಷಿ ಪದ್ಧತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಈ ಸಭೆಯಲ್ಲಿ ಪ್ರತ್ಯೇಕ ಕರಾವಳಿ ಕೃಷಿ ನೀತಿಯನ್ನು ಘೋಷಿಸಬೇಕೆಂದು ಕೃಷಿಕ ವಲಯದಿಂದ ಬಲವಾದ ಆಗ್ರಹ ಕೇಳಿಬಂದಿದೆ. ವಾಣಿಜ್ಯ ಬೆಳೆಗಳ ಆಕರ್ಷಣೆಯಿಂದಾಗಿ ಕರಾವಳಿಯ ಸಾಂಪ್ರದಾಯಿಕ ಭತ್ತದ ಬೇಸಾಯವು ಈಗಾಗಲೇ ಕ್ಷೀಣಿಸುತ್ತಿದ್ದು, ಈ ಭಾಗದ ಆರ್ಥಿಕತೆಯ ಬೆನ್ನೆಲುಬಾಗಿರುವ ತೋಟಗಾರಿಕಾ ಕ್ಷೇತ್ರವೂ ಸಹ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
ಪ್ರಸ್ತುತ ಕರಾವಳಿಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಕೆಗೆ ಹಳದಿ ರೋಗ, ಎಲೆಚುಕ್ಕೆ ಮತ್ತು ಕೊಳೆರೋಗಗಳು ವ್ಯಾಪಕವಾಗಿ ಆವರಿಸಿದ್ದು, ನೂರಾರು ಎಕರೆ ತೋಟಗಳು ನಾಶದ ಅಂಚಿಗೆ ತಲುಪಿವೆ. ಇದಕ್ಕೆ ಪರ್ಯಾಯವಾಗಿ ರೈತರು ನೆಚ್ಚಿಕೊಂಡಿದ್ದ ರಬ್ಬರ್, ಕಾಫಿ ಮತ್ತು ವೆನಿಲ್ಲಾ ಬೆಳೆಗಳು ಕೂಡ ಮಾರುಕಟ್ಟೆ ಏರಿಳಿತ ಹಾಗೂ ರೋಗಬಾಧೆಯಿಂದಾಗಿ ನಿರೀಕ್ಷಿತ ಲಾಭ ತಂದುಕೊಡುತ್ತಿಲ್ಲ. ಈ ಅತಂತ್ರ ಸ್ಥಿತಿಯಿಂದ ಕೃಷಿಕರನ್ನು ಪಾರು ಮಾಡಲು ಕರಾವಳಿಯ ಮಣ್ಣು, ನೀರು ಮತ್ತು ಹವಾಮಾನಕ್ಕೆ ಸೂಕ್ತವಾದ ಆಳವಾದ ವೈಜ್ಞಾನಿಕ ಸಂಶೋಧನೆಗಳು ಹಾಗೂ ದೂರಗಾಮಿ ನೀತಿಯ ಅಗತ್ಯವಿದೆ ಎಂದು ಸ್ಥಳೀಯ ರೈತ ಸಂಘಟನೆಗಳು ಪ್ರತಿಪಾದಿಸಿವೆ.
ಈ ವಿಶೇಷ ನೀತಿಯ ಜೊತೆಗೆ, ನೆರೆಯ ಕೇರಳ ರಾಜ್ಯದ ಮಾದರಿಯಲ್ಲೇ ರಬ್ಬರ್ ಬೆಳೆಗೆ ಪ್ರತಿ ಕೆಜಿಗೆ 300 ರೂಪಾಯಿಗಳ ಬೆಂಬಲ ಬೆಲೆ ನಿಗದಿಪಡಿಸಬೇಕು ಮತ್ತು ಪ್ರತಿ ತಾಲ್ಲೂಕಿನಲ್ಲಿ ಸುಸಜ್ಜಿತ ಮಣ್ಣು ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಬೇಕೆಂಬ ಪ್ರಮುಖ ಬೇಡಿಕೆಗಳನ್ನು ರೈತರು ಸರ್ಕಾರದ ಮುಂದಿಟ್ಟಿದ್ದಾರೆ. ಇದರೊಂದಿಗೆ, ಕಲುಷಿತಗೊಳ್ಳುತ್ತಿರುವ ನೇತ್ರಾವತಿ ಮತ್ತು ಫಲ್ಗುಣಿ ನದಿಗಳ ಸಂರಕ್ಷಣೆಗಾಗಿ ಸೂಕ್ತ ತ್ಯಾಜ್ಯ ನೀರು ಮರುಬಳಕೆ ಯೋಜನೆ ಹಾಗೂ ಕರಾವಳಿ ಪ್ರವಾಸೋದ್ಯಮ ಸರ್ಕ್ಯೂಟ್ ರಚನೆಗೂ ಒತ್ತು ನೀಡಬೇಕಿದೆ. ಮುಂಬರುವ ಮಂಗಳೂರು ಸಂಪುಟ ಸಭೆಯಲ್ಲಿ ಕೃಷಿ ಉತ್ಪನ್ನಗಳ ನೇರ ಮಾರುಕಟ್ಟೆ ಹಾಗೂ ಕೋಲ್ಡ್ ಸ್ಟೋರೇಜ್ ವ್ಯವಸ್ಥೆಗೆ ಸರ್ಕಾರ ಹಸಿರು ನಿಶಾನೆ ತೋರಲಿದೆಯೇ ಎಂಬುದನ್ನು ಕರಾವಳಿಯ ಜನತೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.