ಮಂಗಳೂರು ರೈಲ್ವೇ ಮೈಸೂರು ಪಾಲು : ಕರಾವಳಿ ಭಾಗದ ಜನತೆಯ ದಶಕಗಳ ಕನಸು ನನಸು

ಮಂಗಳೂರು ರೈಲ್ವೆ ಜಾಲದ ಆಡಳಿತವನ್ನು ನೈಋತ್ಯ ರೈಲ್ವೆಗೆ ಹಸ್ತಾಂತರಿಸಲು ಅಧಿಕೃತ ಒಪ್ಪಿಗೆ ನೀಡಿದೆ. ಈ ಮಹತ್ವದ ತೀರ್ಮಾನವು ಮುಂಬರುವ ಅಕ್ಟೋಬರ್ 1 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ.

By ರಶ್ಮಿ ಎಸ್. | Rashmi S

1 min read

WhatsAppPost
mangalore railway mysore share coastal Karnataka peoples decades old dream comes true
mangalore railway mysore share coastal Karnataka peoples decades old dream comes true

ಮಂಗಳೂರು : ಕರಾವಳಿಯ ಮಂಗಳೂರು ಪ್ರಾಂತ್ಯದ ರೈಲ್ವೆ ನೆಟ್‌ವರ್ಕ್ ಅನ್ನು ದಕ್ಷಿಣ ರೈಲ್ವೆ ವಲಯದಿಂದ ಮುಕ್ತಗೊಳಿಸಿ, ಕರ್ನಾಟಕದ ನೈಋತ್ಯ ರೈಲ್ವೆ ವಲಯಕ್ಕೆ ಸೇರಿಸಬೇಕೆಂಬ ಕರಾವಳಿ ಭಾಗದ ಜನರ ಬಹುಕಾಲದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ.

ಈ ಕುರಿತು ಸಾರ್ವಜನಿಕರು ಸಲ್ಲಿಸಿದ್ದ ಸುದೀರ್ಘ ಮನವಿಯನ್ನು ಪುರಸ್ಕರಿಸಿರುವ ರೈಲ್ವೆ ಮಂಡಳಿಯು, ಮಂಗಳೂರು ರೈಲ್ವೆ ಜಾಲದ ಆಡಳಿತವನ್ನು ನೈಋತ್ಯ ರೈಲ್ವೆಗೆ ಹಸ್ತಾಂತರಿಸಲು ಅಧಿಕೃತ ಒಪ್ಪಿಗೆ ನೀಡಿದೆ. ಈ ಮಹತ್ವದ ತೀರ್ಮಾನವು ಮುಂಬರುವ ಅಕ್ಟೋಬರ್ 1 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ.

ಹೊಸ ಆಡಳಿತಾತ್ಮಕ ಬದಲಾವಣೆಯ ಅನ್ವಯ, ಉಳ್ಳಾಲ ನಿಲ್ದಾಣದವರೆಗಿನ ಮಂಗಳೂರು ರೈಲ್ವೆ ವ್ಯಾಪ್ತಿಯು ಇನ್ಮುಂದೆ ಕೇರಳದ ಪಾಲಕ್ಕಾಡ್ ವಿಭಾಗದ ಬದಲಾಗಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ನಿಯಂತ್ರಣಕ್ಕೆ ಒಳಪಡಲಿದೆ. ಈವರೆಗೂ ಪಡೀಲ್‌ನಲ್ಲಿ ಇರುತ್ತಿದ್ದ ವಲಯಗಳ ನಡುವಿನ ಸಂಪರ್ಕ ಬಿಂದು (ಇಂಟರ್ಚೇಂಜ್ ಪಾಯಿಂಟ್) ಇನ್ನು ಮುಂದೆ ಉಳ್ಳಾಲಕ್ಕೆ ಸ್ಥಳಾಂತರಗೊಳ್ಳಲಿದೆ.

ಇನ್ನು ತೋಕೂರು ನಿಲ್ದಾಣವು ಎಂದಿನಂತೆ ಕೊಂಕಣ ರೈಲ್ವೆ ನಿಗಮದ ಅಡಿಯಲ್ಲೇ ಮುಂದುವರಿಯಲಿದ್ದು, ಕೊಂಕಣ ಹಾಗೂ ನೈಋತ್ಯ ರೈಲ್ವೆ ವಲಯಗಳ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸಲಿದೆ. ಈ ಹೊಸ ಜಾಲದ ಪ್ರಧಾನ ಕಚೇರಿಗಳು ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಇರಲಿವೆ.

ಈ ಐತಿಹಾಸಿಕ ನಿರ್ಧಾರದಿಂದ ಕರಾವಳಿ ಕರ್ನಾಟಕದ ರೈಲ್ವೆ ವ್ಯವಸ್ಥೆಗೆ ಹೊಸ ಚೈತನ್ಯ ಸಿಗಲಿದೆ. ಈ ಹಿಂದೆ ಕೇರಳ ವಲಯದ ಅಡಿಯಲ್ಲಿದ್ದಾಗ ಎದುರಿಸುತ್ತಿದ್ದ ಆಡಳಿತಾತ್ಮಕ ಗೊಂದಲಗಳು ಹಾಗೂ ನಿರ್ಧಾರ ಕೈಗೊಳ್ಳುವಲ್ಲಿ ಆಗುತ್ತಿದ್ದ ವಿಳಂಬಕ್ಕೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ.

ಕರಾವಳಿ ಭಾಗದ ನಿಲ್ದಾಣಗಳ ಮೂಲಸೌಕರ್ಯ ವೃದ್ಧಿ, ಪ್ರಯಾಣಿಕರ ಸಮಸ್ಯೆಗಳ ಶೀಘ್ರ ವಿಲೇವಾರಿ ಹಾಗೂ ಮುಖ್ಯವಾಗಿ ಮಂಗಳೂರಿನಿಂದ ರಾಜ್ಯದ ಇತರೆ ಪ್ರಮುಖ ನಗರಗಳಿಗೆ ಹೊಸ ರೈಲುಗಳ ಸಂಪರ್ಕ ಕಲ್ಪಿಸಲು ಇದು ಸಹಕಾರಿಯಾಗಲಿದೆ. ಪ್ರಾದೇಶಿಕ ಹಿತಾಸಕ್ತಿಗೆ ಪೂರಕವಾಗಿರುವ ಈ ಆದೇಶವು ಕರಾವಳಿಯ ಆರ್ಥಿಕ ಮತ್ತು ಪ್ರವಾಸೋದ್ಯಮ ಬೆಳವಣಿಗೆಗೆ ದಾರಿದೀಪವಾಗಲಿದೆ.

Topics

ಸಂಬಂಧಿತ ಸುದ್ದಿಗಳು