ಮಂಗಳೂರು: ಆಸ್ತಿ ಆಸೆಗೆ ಬಿದ್ದು ಸ್ವಂತ ತಂದೆಯನ್ನೇ ಮಗಳು ಹತ್ಯೆ ಮಾಡಿ, ಗುಟ್ಟಾಗಿ ಅಂತ್ಯಕ್ರಿಯೆ ನೆರವೇರಿಸಿರುವ ಆಘಾತಕಾರಿ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉರ್ವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇದೀಗ ಪೊಲೀಸರು ಬೋಂದೆಲ್ ಮತ್ತು ಕುಂಟಿಕಾನ ಬಳಿಯ ದೇರೆಬೈಲ್ ಚರ್ಚ್ ಆವರಣದಲ್ಲಿ ಹೂತು ಹಾಕಲಾಗಿದ್ದ ಹೊರತೆಗೆದು ಎಫ್‌ಎಸ್‌ಎಲ್ (FSL) ಪರೀಕ್ಷೆಗೆ ಒಳಪಡಿಸಲು ಮುಂದಾಗಿದ್ದಾರೆ.
ಕಳೆದ ಜುಲೈ 19ರಂದು ಮಂಗಳೂರಿನ ಕೊಟ್ಟಾರ ಫಸ್ಟ್ ಕ್ರಾಸ್ ನಿವಾಸಿ, ಮಾಜಿ ಅನಿವಾಸಿ ಭಾರತೀಯ ಆಲ್ಬರ್ಟ್ ರೇಗೋ ಅವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಆಲ್ಬರ್ಟ್ ಅವರ ಸಾವಿನ ವಿಚಾರವನ್ನು ಸ್ಥಳೀಯರಿಗಾಗಲಿ ಅಥವಾ ಇತರ ಕುಟುಂಬಸ್ಥರಿಗಾಗಲಿ ತಿಳಿಸದೆ, ಅವರ ಮಗಳು ಮಾಯಾ ರೇಗೋ ತನ್ನ ಆಪ್ತರ ನೆರವಿನಿಂದ ಮರಣೋತ್ತರ ಪರೀಕ್ಷೆಯನ್ನೂ ನಡೆಸದೆ ತರಾತುರಿಯಲ್ಲಿ ಅಂತ್ಯಕ್ರಿಯೆ ಮುಗಿಸಿದ್ದಳು.
ಈ ನಡೆ ಬಗ್ಗೆ ಅನುಮಾನಗೊಂಡ ಆಲ್ಬರ್ಟ್ ರೇಗೋ ಅವರ ಆಪ್ತ ಸ್ನೇಹಿತ ಹೆರಾಲ್ಡ್ ಪಿರೇರಾ, ಮಗಳು ಮಾಯಾ ರೇಗೋ ಹಾಗೂ ಇತರರ ವಿರುದ್ಧ ಉರ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಆರೋಪಿ ಮಾಯಾ ರೇಗೋ ಮಾದಕ ವ್ಯಸನಿಯಾಗಿದ್ದು, ಹಣ ಹಾಗೂ ಆಸ್ತಿಗಾಗಿ ಸ್ನೇಹಿತರೊಂದಿಗೆ ಸೇರಿ ತಂದೆಯನ್ನು ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಕೊಲೆಗೂ ಮುನ್ನ ತಂದೆಯಿಂದ ಬಲವಂತವಾಗಿ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾಳೆ.
ಸಂಚಿನಲ್ಲಿ ವೈದ್ಯರು, ಪೋಲಿಸ್ ಭಾಗಿ? ಈ ಕೃತ್ಯಕ್ಕೆ ಬೋಂದೆಲ್‌ನ ವೈದ್ಯರೊಬ್ಬರು ಹಾಗೂ ಒಬ್ಬ ಪೊಲೀಸ್ ಸಿಬ್ಬಂದಿ ಸಹಕರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವಿದೇಶದಲ್ಲಿದ್ದು ಸಾಕಷ್ಟು ಆಸ್ತಿ ಮಾಡಿದ್ದ ಆಲ್ಬರ್ಟ್ ಅವರಿಗೆ ಇತರ ಇಬ್ಬರು ಮಕ್ಕಳಿದ್ದಾರೆ. ಆದರೆ ಜೊತೆಗಿದ್ದ ಮಾಯಾ ಪ್ರತಿದಿನ ಕಿರುಕುಳ ಹಾಗೂ ಹಲ್ಲೆ ನಡೆಸುತ್ತಿದ್ದ ಬಗ್ಗೆ ಆಲ್ಬರ್ಟ್ ಅವರು ಜೀವಂತವಾಗಿದ್ದಾಗ ತಮ್ಮ ಸ್ನೇಹಿತರ ಬಳಿ ನೋವು ತೋಡಿಕೊಂಡಿದ್ದರು.
ಉರ್ವಾ ಪೊಲೀಸರು ಪ್ರಕರಣದ ಎಫ್‌ಐಆರ್ ಆಧರಿಸಿ ಹಲವು ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ. ಸತ್ಯಾಸತ್ಯತೆ ಹೊರತರಲು ದೇರೆಬೈಲ್ ಚರ್ಚ್ ದಫನ ಭೂಮಿಯಿಂದ ಆಲ್ಬರ್ಟ್ ರೇಗೋ ಅವರ ಶವವನ್ನು ಅಗೆದು ಹೊರತೆಗೆಯಲಾಗುತ್ತಿದೆ. ಎಫ್‌ಎಸ್‌ಎಲ್ ತಜ್ಞರು, ಪೊಲೀಸರು, ದೂರುದಾರರು ಹಾಗೂ ಆರೋಪಿ ಮಾಯಾ ರೇಗೋ ಸಮ್ಮುಖದಲ್ಲೇ ಅಸ್ಥಿಪಂಜರದ ವೈಜ್ಞಾನಿಕ ಪರೀಕ್ಷೆ ನಡೆಯಲಿದೆ.