Kannada News Next

mangaluru

ಮಂಗಳೂರು MRPLನಲ್ಲಿ ಸ್ಪೋಟದ ಭೀಕರತೆ : 54 ಮನೆ, 8 ಪ್ರಾರ್ಥನಾ ಮಂದಿರಗಳಿಗೆ ಹಾನಿ

ಘಟನೆಯಲ್ಲಿ ಓರ್ವ ಕಾರ್ಮಿಕ ಮೃತಪಟ್ಟಿದ್ರೆ, ಬರೋಬ್ಬರಿ 54 ಮನೆಗಳಿಗೆ ಹಾನಿಯಾಗಿದ್ದು, 8 ಪ್ರಾರ್ಥನಾ ಮಂದಿರಗಳು ಜಖಂಗೊಂಡಿದೆ

By Arun Gundmi | ಅರುಣ್‌ ಗುಂಡ್ಮಿ Editor-in-Chief
mrpl blast 54 houses, 8 places of worship damaged

ಮಂಗಳೂರು : ಕರಾವಳಿಗರನ್ನೇ ಬೆಚ್ಚಿ ಬೀಳಿಸಿದ್ದ ಮಂಗಳೂರು ಹೊರವಲಯದ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಕಾರ್ಖಾನೆಯ ಘಟಕದಲ್ಲಿ ನಡೆದ ಭೀಕರ ಸ್ಪೋಟ ಬಾರೀ ಅನಾಹುತವನ್ನೇ ಸೃಷ್ಟಿಸಿದೆ. ಘಟನೆಯಲ್ಲಿ ಓರ್ವ ಕಾರ್ಮಿಕ ಮೃತಪಟ್ಟಿದ್ರೆ, ಬರೋಬ್ಬರಿ 54 ಮನೆಗಳಿಗೆ ಹಾನಿಯಾಗಿದ್ದು, 8 ಪ್ರಾರ್ಥನಾ ಮಂದಿರಗಳು ಜಖಂಗೊಂಡಿದೆ ಎಂದು ರಾಷ್ಟ್ರೀಯ ಪತ್ರಿಕೆ ಹಿಂದೂ ವರದಿ ಮಾಡಿದೆ.

ಮಂಗಳೂರು MRPL ಸ್ಪೋಟ : ಎಲ್ಲೆಲ್ಲಿ ಎಷ್ಟು ಹಾನಿ?

ಜೋಕಟ್ಟೆಯಲ್ಲಿರುವ ಎಂಆರ್‌ಪಿಎಲ್‌ನ ಕೋಕರ್ ಹೈಡ್ರೋಟ್ರೇಟರ್ (Coker Hydrotreater - CHT) ಘಟಕದಲ್ಲಿ ಈ ಸ್ಪೋಟ ಸಂಭವಿಸಿದೆ. ಸ್ಪೋಟದ ತೀವ್ರತೆಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕ ಸೃಷ್ಟಿಯಾಗಿದೆ ಅದ್ರಲ್ಲೂ ಜೋಕಟ್ಟೆ, ಕಳವಾರು ಹಾಗೂ ಬಾಳ ಗ್ರಾಮದಲ್ಲಿ ವ್ಯಾಪಕ ಹಾನಿ ಸಂಭವಿಸಿದೆ.

  • ಜೋಕಟ್ಟೆ: 25 ಮನೆ, 5 ಪ್ರಾರ್ಥನಾ ಮಂದಿರ

  • ಕಳವಾರು : 19 ಮನೆ ಮತ್ತು 3 ಪ್ರಾರ್ಥನಾ ಮಂದಿರ

  • ಬಾಳ ಗ: 10 ಮನೆಗಳಿಗೆ ಹಾನಿಯಾಗಿದೆ.

ಎಲ್ಲಾ ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಕಿಟಕಿ ಗಾಜುಗಳು ಪುಡಿ ಪುಡಿಯಾಗಿದೆ. ಎಂಆರ್‌ಪಿಎಲ್‌ ಘಟಕದಲ್ಲಿ ನಡೆದಿರುವ ಸ್ಪೋಟದ ಸದ್ದು ಮಂಗಳೂರು ನಗರ, ಮಂಗಳೂರು ವಿಮಾನ ನಿಲ್ದಾಣ, ಬಜಪೆಯವರೆಗೂ ಕೇಳಿಸಿತ್ತು ಎಂದು ಸಾರ್ವಜನಿಕರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಎಂಆರ್‌ಪಿಎಲ್‌ನಲ್ಲಿ ನಡೆದ ಘಟನೆಯಲ್ಲಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಸ್ಪೋಟ ಸಂಭವಿಸುವ ಸಂದರ್ಭದಲ್ಲಿ ಈ ಘಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಇರಲಿಲ್ಲ. ಹೀಗಾಗಿ ದೊಡ್ಡ ಮಟ್ಟದಲ್ಲಿ ಸಂಭವಿಸಬಹುದಾಗಿದ್ದ ಪ್ರಾಣ ಹಾನಿ ತಪ್ಪಿದಂತಾಗಿದೆ.

ಎಂಆರ್‌ಪಿಎಲ್‌ ಕಾರ್ಖಾನೆಯ ಸುರಕ್ಷತಾ ವೈಫಲ್ಯದ ಕುರಿತು ಇದೀಗ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರರಕಣ ದಾಖಲಾಗಿದ್ದು, ಆಡಳಿತ ಮಂಡಳಿ ಹಾಗೂ ಸಂತ್ರಸ್ತರ ನಡುವೆ ಪರಿಹಾರ ಕಾರ್ಯಕ್ಕಾಗಿ ಮಾತುಕತೆ ನಡೆಯುತ್ತಿದೆ. ನಿನ್ನೆ ಮಧ್ಯಾಹ್ನ ಸಂಭವಿಸಿದ ಸ್ಪೋಟದಿಂದಾಗಿ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.